ಸಮಗ್ರ ನ್ಯೂಸ್: ‘ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದು, ಬಿಜೆಪಿಗೆ ಬಾರೀ ಶಾಕ್ ನೀಡಿದ್ದಾರೆ. ಹಾಲಿ ಎಂಎಲ್ಎ ಹಾಗೂ ಸಚಿವ ಸುನಿಲ್ ಕುಮಾರ್ ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ. ಕಾರ್ಕಳದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.
‘ನಾನು ಬಿಜೆಪಿ, ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು’ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಶ್ರೀರಾಮಸೇನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಹರೀಶ್ ಅಧಿಕಾರಿ, ಸುಧೀರ್ ಹೆಬ್ರಿ, ಸುಂದರ, ಜಯರಾಮ್ ಉಪಸ್ಥಿತರಿದ್ದರು