ಸಮಗ್ರ ನ್ಯೂಸ್: ದೇವರ ಬಳಿ ನಾನಾ ಬಗೆಯ ಪ್ರಾರ್ಥನೆಗಳನ್ನು ಮಾಡಿ ಅದನ್ನು ಪತ್ರಗಳ ಮೂಲಕ ಕಾಣಿಕೆ ಹುಂಡಿಯಲ್ಲಿ ಹಾಕುವುದು ಸಾಮಾನ್ಯ. ಇದರಲ್ಲಿ ತಮ್ಮ ಅಭಿವೃದ್ಧಿಗೆ, ಪ್ರೇಮ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ್ದೇ ಅನೇಕ ಪತ್ರಗಳಿರುತ್ತವೆ. ಆದರೆ, ಇಲ್ಲೋರ್ವ ಒಂದು ಕುಟುಂಬ ಸರ್ವನಾಶ ಆಗಲೆಂಬ ವಿಚಿತ್ರ, ಆಘಾತಕಾರಿ ಬೇಡಿಕೆಯನ್ನು ದೇವರಿಗೆ ಸಲ್ಲಿಸಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆ ನಡೆದಿದ್ದು ಈ ವೇಳೆ ಭಕ್ತರ ಕೋರಿಕೆ ಪತ್ರಗಳು ಸಿಕ್ಕಿದೆ. ಅದರಲ್ಲಿ, ಬಳ್ಳಾರಿ ಜಿಲ್ಲೆ ಎಂದು ನಮೂದಿಸಿರುವ ಭಕ್ತನೋರ್ವ “ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಬೇಕು, ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು. ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು. ಇವರೆಲ್ಲರೂ ಒಂದು ವರ್ಷದ ಒಳಗೆ ಸಾಯಬೇಕು’ ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.
ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ರೀತಿ ಎಲ್ಲಾ ಬೇಡಿಕೆ ಇರುತ್ತವೆಯೇ..? ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ..? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಪತ್ರದಲ್ಲಿ ದೇವರಿಗೆ ಒಂದು ಅಂತರ ಧರ್ಮೀಯ ಪ್ರೀತಿಯ ನಿವೇದನೆ ಇದೆ. ಅದರಲ್ಲಿ, ಯುವತಿಯೊಬ್ಬಳು ‘ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು, ನಾನು ಹಿಂದೂ ಅವನು ಮುಸ್ಲಿಮ್. ಆದರೆ ನಾನು ತಪ್ಪು ಮಾಡುತ್ತಿಲ್ಲ ನನಗೆ ಅವನಿಷ್ಟ ಅವನಿಗೆ ನಾನು ಇಷ್ಟ. ನನ್ನ ಜೀವನವೇ ಅವನು. ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳೊಮ್ಮೆ ನಿನ್ನ ಸನ್ನಿಧಿಗೆ ಬರುವೆ’ ಎಂದು ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾಳೆ.
ಮತ್ತೊಂದು ಕಾಗದದಲ್ಲಿ ‘ನರಸಿಂಹ ಸ್ವಾಮಿ ಈ ನಂಬರುಗಳಿಗೆ ಮೊದಲನೇ ಬಹುಮಾನ ಬರುವಂತೆ ಮಾಡು ನಿನ್ನ ಹುಂಡಿಗೆ 101 ರೂ. ಹಾಕುತ್ತೇನೆ’ ಎಂದು ಲಾಟರಿ ಟಿಕೆಟ್ ನಂಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾನೆ.
ಒಟ್ಟಾರೆ ದೇಗುಲದ ಹುಂಡಿಯಲ್ಲಿ ಸಿಕ್ಕಿದ ಪತ್ರಗಳು ದೇವಳದ ಸಿಬ್ಬಂದಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.