ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅತ್ಯಂತ ಆಕರ್ಷಕ ಹಾಗೂ ಬೆಲೆಬಾಳುವ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ.
ಈ ತಳಿಯ ಹಸುಗಳ ಮೂಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮವಾಗಿದ್ದು ಈ ಕಾರಣದಿಂದ ಹಸುವಿನ ತಳಿಗೂ ಗ್ರಾಮದ ಹೆಸರೇ ಬಂದಿದೆ. ದೇಶದಲ್ಲಿ ಸುಮಾರು 40 ವಿವಿಧ ತಳಿಯ ಹಸುಗಳಿದ್ದರೂ ಪುಂಗನೂರು ಹಸುವಿಗೆ ಸಮಾನವಾದದ್ದು ಯಾವುದು ಇಲ್ಲ.
ತೀರಾ ಸಾಧು ಸ್ವಭಾವದ ಈತಳಿಯ ದನ ಒಂದಕ್ಕೆ ಲಕ್ಷಾಂತರ ರೂ.ಬೆಲೆ ಇದೆ. ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಇವು ಬಹಳ ಶುಭ್ರ ಹಾಗೂ ಸ್ವಚ್ಛವಾಗಿರುತ್ತವೆ. ಸ್ವಚ್ಛತೆಯ ವಿಚಾರ ಈ ತಳಿಯ ಹಸುಗಳು ಹೆಚ್ಚಿನ ಪ್ರಾಧ್ಯಾನತೆ ನೀಡುತ್ತವೆ. ಮಾಮೂಲು ಆಹಾರ ಪದ್ಧತಿಯಲ್ಲಿ ಬೆಳೆಯುವ ಇವುಗಳಿಗೆ ವಿಶೇಷ ಆಹಾರ ಪದ್ಧತಿಯ ಅಗತ್ಯ ಇರುವುದಿಲ್ಲ. ಹುಲ್ಲುಗಾವಲುಗಳಲ್ಲಿ ಮೇಯಲು ಇವು ಇಷ್ಟಪಡುತ್ತವೆ. ಇವುಗಳು ಸ್ವಭಾವತ: ಜನರೊಂದಿಗೆ ಹಾಗೂ ಇತರ ಜಾನುವಾರುಗಳೊಂದಿಗೆ ಕೂಡಲೇ ಹೊಂದಿಕೊಳ್ಳುತ್ತವೆ. ಬಲು ಬೇಡಿಕೆಯ ಈ ಹಸುಗಳ ಲಭ್ಯತೆ ಇಂದು ಕಷ್ಟವಾಗಿದೆ.
ಗುಣ ವಿಶೇಷಗಳು:
ಶ್ರೀ ಕ್ಷೇತ್ರಕ್ಕೆ ಎರಡು ದನ ಒಂದು ಹೆಣ್ಣು ಹಾಗೂ ಗಂಡು ಕರು ಹಾಗೂ ಒಂದು ಹೋರಿಯನ್ನು ತರಲಾಗಿದೆ. ಇವುಗಳ ಹಾಲಿಗೆ ವಿಶೇಷ ಸ್ಥಾನವಿದ್ದು ಪೌಷ್ಟಿಕತೆ ಮತ್ತು ಪಾವಿತ್ರ್ಯತೆ ಅಧಿಕ. ಹಾಲಿಗೆ ರೋಗನಿರೋಧಕ ಶಕ್ತಿ ಇದ್ದು ಹೋಮಿಯೋಪತಿ ಔಷಧಿಗಳಲ್ಲೂ ಬಳಸಿಕೊಳ್ಳಲಾಗುತ್ತದೆ. ಈ ಹಸುಗಳ ಹಾಲು ಆರೋಗ್ಯಕರವಾಗಿದ್ದು ಮಕ್ಕಳು ರೋಗಿಗಳಿಗೂ ಹೆಚ್ಚು ಉಪಯುಕ್ತ. ಇವುಗಳ ಹಾಲಿನಲ್ಲಿ ಬೆಣ್ಣೆ ಅಂಶವೂ ಹೆಚ್ಚಿದ್ದು , ಇದರಿಂದ ತಯಾರಿಸುವ ತುಪ್ಪಕ್ಕೂ ಸಾವಿರಾರು ರೂ. ಬೆಲೆ ಇದೆ.ಗಿಡ್ಡ ದೇಹ,ಕಡಿಮೆ ತೂಕದ ಇವು ಬಿಳಿ ಬೂದು ಹಾಗೂ ತಿಳಿ ಕಂದು ಬಣ್ಣದಲ್ಲಿ ಇರುತ್ತವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೆ ಈ ಹಸುಗಳ ಹಾಲನ್ನು ಉಪಯೋಗಿಸುವ ಉದ್ದೇಶ ಹಾಗೂ ಅಳಿವಿನಂಚಿನಲ್ಲಿರುವ ಇವುಗಳ ತಳಿಯ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಹಸುಗಳ ಆಗಮನವಾಗಿದೆ.
ಪುರಾಣಗಳಲ್ಲಿ ಕೇಳಿ ಬರುವ ಕಾಮಧೇನು ಪುಂಗನೂರು ತಳಿಯ ಹಸು ಎನ್ನಲಾಗುತ್ತದೆ. ಜತೆಗೆ ಹಿಂದೆಲ್ಲಾ ಈ ಹಸುಗಳನ್ನು ರಾಜರು, ಆಗರ್ಭ ಶ್ರೀಮಂತರು ಮಾತ್ರ ಸಾಕುತ್ತಿದ್ದರು ಎಂಬ ಉಲ್ಲೇಖವೂ ಇದೆ.ತಳಿಯನ್ನು ಅಭಿವೃದ್ಧಿಪಡಿಸಿದ್ದು ಆಂಧ್ರಪ್ರದೇಶದ ರಾಜ ಮನೆತನಗಳು ಎಂದು ಹೇಳಲಾಗುತ್ತದೆ ದೇಶದಲ್ಲಿ ಈಗ ಅತಿ ಕಡಿಮೆ ಸಂಖ್ಯೆಯಲ್ಲಿ ಪುಂಗನೂರು ಹಸುಗಳಿವೆ ಎಂದು ತಿಳಿದುಬಂದಿದೆ.