Ad Widget .

ಯುವಭಾರತದ ರಾಯಬಾರಿ ಈ ಸನ್ಯಾಸಿ

“ಶಕ್ತಿಯೇ ಜೀವನ ದುರ್ಭಲತೆಯೇ ಮರಣ ಜಗತ್ತು ಶಕ್ತಿಯನ್ನು ಪುಜಿಸುತ್ತದೇ ಹೊರತು ದುರ್ಭಲತೆಯನ್ನಲ್ಲ” ಎಂದು ಜಗತ್ತಿಗೆ ಸಾರಿ ಹೇಳಿ ಯುವಕರ ಮನದಲ್ಲಿ ಮಲಗಿರುವ ಚೈತನ್ಯವನ್ನು ಬಡಿದೆಬ್ಬಿಸಿ ದೇಶಕಟ್ಟಲು ಪ್ರೇರಣೆ ನೀಡಿದರು ಸಿಡಿಲ ಸನ್ಯಾಸಿ. ದೈಹಿಕ, ಹಾಗೂ ಮಾನಸಿಕ ಶಕ್ತಿ ಗಳಿಸುವ ಮೂಲಕ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದು ಸಾರಿ ಸಾರಿ ಹೇಳಿದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು.

Ad Widget . Ad Widget .

ತಮ್ಮ ಚಿಂತನೆಗಳು ಶಾಶ್ವತವಾಗಿ ಈ ದೇಶದಲ್ಲಿ ಉಳಿದು ದೇಶಕಟ್ಟುವ ಕೆಲಸ ಸದಾ ನಡೆಯಬೇಕು ಎಂದು ತಮ್ಮ ಗುರುಗಳ ಆದರ್ಶ ತತ್ವ ಸಿದ್ದಾಂತ ಮತ್ತು ಸೇವೆ ಪ್ರಸಾರಮಾಡಲು ರಾಮಕೃಷ್ಣ ಮಠ ಮತ್ತು ಮಿಷನ್ ಎನ್ನುವ ಸಂಸ್ಥೆಯನ್ನು ತಮ್ಮ ಗುರುಗಳ ಸ್ಮರಣಾರ್ಥ ಸ್ಥಾಪಿಸಿ ‘ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ’ ಎಂಬ ಧ್ಯೇಯವಾಕ್ಯವನ್ನು ಹೊಂದಿಸಿದರು.

Ad Widget . Ad Widget .

ರಾಮಕೃಷ್ಣ ಮಿಷನ್ ದೇಶಾದ್ಯಂತ ತನ್ನ‌ಸೇವಾ ಕೆಲಸಕಾರ್ಯಗಳು ಮಾಡುವ ಮೂಲಕ ಮಾದರಿಯಾಗಿದೆ. ರಾಮಕೃಷ್ಣ ಮಠದ ಯತಿಗಳ ಅಣತಿಯಂತೆ ತನ್ನ ಸೇವಾಂಕೈಕರ್ಯ ಮಾಡುತ್ತಾ ದೇಶದ ಯುವಪಿಳಿಗೆಗೆ ದಿಕ್ಸೂಚಿಯಾಗಿ ಕಾರ್ಯ ಮಾಡುತ್ತಿದೆ. ಸರ್ಕಾರ ಮಾಡದ ಅದೆಷ್ಟೋ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದು ಸ್ಲ್ಯಾಘನೀಯ. ಬಡವ ದಿನ ದಲಿತರಿಗೆ, ಲಿಂಗ,ಧರ್ಮ,ವರ್ಣ ಬೇದಭಾವ ಮಾಡದೇ ಸೇವೆಗೈಯುತ್ತಿದೆ.

  • ಸಂಸ್ಥೆಯ ಕೆಲಸಕಾರ್ಯಗಳು:
    ರಾಮಕೃಷ್ಣ ಮಿಷನ್ ದೇಶ ವಿದೇಶಗಲ್ಲೂ ತನ್ನ ಶಾಖೆಗಳನ್ನು ಹೊಂದಿದೆ. ನಿಷ್ಠಾವಂತ ಸೇವಾಭಾವದ ಯುವ ಪಡೆಯ ಬಳಗವೇ ಅಲ್ಲಿದೆ. ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ತನ್ನ ಶಾಖೆಗಳ ಮೂಲಕ ಮಾಡುತ್ತದೆ. ಕರ್ನಾಟಕದ ಮೈಸೂರು, ಪೊನ್ನಂಪೇಟೆ ಬೆಂಗಳೂರು, ಮಂಗಳೂರು , ಬೆಳಗಾವಿಯಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.‌ ರಾಮಕೃಷ್ಣ ಮಿಷನ್ ಹತ್ತಾರು ಕೆಲಸ ಕಾರ್ಯ ಮಾಡಲು ತನ್ನದೇ ಸೈದಾಂತಿಕ ಸೇವಾಭಾವದ ಗುರಿ ಉದ್ದೇಶಗಳನ್ನು ಇಟ್ಟು ಕೊಂಡು ಕೆಲಸ ನಿರ್ವಹಿಸುತ್ತಿದೆ.‌
  • ಎಲ್ಲ ಕೆಲಸವೂ ಪವಿತ್ರವೇ:
    ಎಲ್ಲ ದುಡಿಮೆಯೂ ಪವಿತ್ರವೇ ಆಗಿದೆ. ನೆಲ ಗುಡಿಸುವ ಅಥವಾ ಚಪ್ಪಲಿ ಹೊಲಿಯುವ ಸೇವಾ ಕಾರ್ಯವನ್ನು ಕೂಡ ದೇವರ ಕೆಲಸಗಳಂತೆಯೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು. ಯಾರೂ ಯಾವುದು ಮೇಲು ಕೀಳಲ್ಲ. ಪವಿತ್ರ ಅಪವಿತ್ರ ಎಂಬ ಭಾವನೆ ಇಲ್ಲ. ಎಲ್ಲವೂ ದೇವರ ಸೇವೆಯೇ ಆಗಿದೆ.

*ಕೈಂಕರ್ಯ ಭಾವದಿಂದ ದುಡಿಮೆ:
ಭಗವಂತನೇ ಎಲ್ಲ ದುಡಿಮೆಯ ಅಂತಿಮ ಆಕರ ಮತ್ತು ಎಲ್ಲ ಯಜ್ಞಗಳ ಫಲಾನುಭವಿ. ಆದ್ದರಿಂದ, ಎಲ್ಲ ದುಡಿಮೆಯನ್ನು ಕೈಂಕರ್ಯವನ್ನಾಗಿ ಕೈಗೊಳ್ಳಬೇಕು ಮತ್ತು ಕರ್ಮಫಲಗಳನ್ನು ಭಗವಂತನಿಗೆ ಸಮರ್ಪಿಸಬೇಕು.

*ಮಾನವ ಸೇವೆಯೇ ದೇವರ ಸೇವೆ:
ಮನುಷ್ಯನಲ್ಲಿ ದೈವಿಕತೆ ಅಂತರ್ನಿಹಿತವಾಗಿ ಇರುವುದರಿಂದ, ನಾವು ಮಾಡುವ ಮಾನವಸೇವೆ ವಾಸ್ತವವಾಗಿ ದೇವರ ಸೇವೆಯೇ ಆಗುತ್ತದೆ. ಸೇವೆಯ ಅಗತ್ಯವಿರುವ ವ್ಯಕ್ತಿಯನ್ನು ಕನಿಕರದ ವಸ್ತುವನ್ನಾಗಿ ಕಾಣುವುದರ ಬದಲು ಪೂಜೆಯ ವಸ್ತುವನ್ನಾಗಿ ಕಾಣಬೇಕು.

  • ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ:
    ಪ್ರತಿ ಕೆಲಸ ಸೇವೆಯು ಶೃದ್ದೆ ಭಕ್ತಿ ಪ್ರಾಮಾಣಿಕ ನಿಷ್ಠೆಯಿಂದ ಮಾಡುವದರಿಂದ ಅದೊಂದು ಆದ್ಯಾತ್ಮ ಸಾಧನೆಯೆ ಸರಿ.ಪರಿಶುದ್ದ ಮನಸ್ಸು ಸದಾ ದೇವರನ್ನು ಕಾಣಬಲ್ಲದು ಮತ್ತು ಉತ್ತಮ‌ ಫಲ ನೀಡಬಲ್ಲದು

*ಶಕ್ತಿಯನ್ನು ಆಧರಿಸಿದ ನೈತಿಕತೆ:
ಬದಕಿನ ಎಲ್ಲ ಅನೈತಿಕತೆ, ಕೆಡುಕು, ದುಃಖಗಳಿಗೆ ವ್ಯಕ್ತಿಯ ದೌರ್ಬಲ್ಯವೇ ಮುಖ್ಯ ಕಾರಣ. ನಮ್ಮ ದೌರ್ಬಲ್ಯವನ್ನು ಗೆಲ್ಲಲು ಮತ್ತು ಶೀಲಸಂಪನ್ನವಾದ ಬದುಕನ್ನು ನಡೆಸಲು ಅತ್ಮಜ್ಞಾನ ಅಗಾಧ ಶಕ್ತಿಯನ್ನೀಯುತ್ತದೆ. ಪ್ರತಿಯೊಬರಲ್ಲೂ ಹಲವಾರು ಸುಪ್ತ ಶಕ್ತಿಗಳಿರುತ್ತವೆ; ಆದರೆ ಅವುಗಳಲ್ಲಿ ಬಹುಪಾಲು, ನಮ್ಮ ಭಯ ದೌರ್ಬಲ್ಯಗಳಿಂದಾಗಿ ವಾಸ್ತವ ರೂಪ ತಳೆಯುವುದಿಲ್ಲ. ಆತ್ಮಜ್ಞಾನದ ಮೂಲಕ ಭಯ, ದೌರ್ಬಲ್ಯಗಳನ್ನು ಗೆದ್ದಾಗ, ಈ ಸುಪ್ತ ಶಕ್ತಿಗಳು ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಯನ್ನು ಸ್ವಾಮೀಜಿ “ಪುರುಷ ನಿರ್ಮಾಪಕ” ಶಿಕ್ಷಣವೆಂದು ಕರೆದರು.

*ಧರ್ಮಸಾಮರಸ್ಯ:
ಒಂದೇ ಸತ್ಯಕ್ಕೆ ಹಲವು ಹೆಸರುಗಳು ಹಾಗೂ ವಿಭಿನ್ನ ಆಧ್ಯಾತ್ಮಿಕ ಪಥಗಳು ಒಂದೇ ಗುರಿಗೊಯ್ಯುತ್ತವೆ ಎಂಬ ವಿಚಾರಗಳು ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಮತ್ತು ಅನೇಕ ಸಂತರ ಬೋಧನೆಗಳಲ್ಲಿ ಕಂಡುಬರುತ್ತವೆ. ಈ ಎಲ್ಲದರ ಸಾರ ಒಂದೇ ಈ ವಿಚಾರ ಯುವಕರಿಗೆ ಒತ್ತಿ ಹೇಳಿದರು.

*ಯೋಗ ಸಮನ್ವಯ:
ಅಜ್ಞಾನ ನಿವಾರಣೆ ಹಾಗೂ ದೈವಸಾಕ್ಷಾತ್ಕಾರಕ್ಕೊಯ್ಯುವ ಆಂತರಿಕ ದೈವಿಕತೆಯ ಅಭಿವ್ಯಕ್ತಿಯು ಯೋಗದ ಮೂಲಕ ಸಾಧಿತವಾಗುತ್ತದೆ. ಜ್ಞಾನ ಭಕ್ತಿ, ರಾಜ ಮತ್ತು ಕರ್ಮಯೋಗಗಳು ದೈವ ಸಾಕ್ಷಾತ್ಕಾರದ ಸ್ವತಂತ್ರ ಮಾರ್ಗ. ಆದರೆ ವಿಚಾರ, ಭಾವ ಅಥವಾ ಸಂಕಲ್ಪದಂತಹ ಶಕ್ತಿಗಳ ಬೆಳವಣಿಗೆಯಲ್ಲಿ ಒಂದೊಂದು ಯೋಗವೂ ಯಾವುದೋ ಒಂದು ಶಕ್ತಿಗೆ ಹೆಚ್ಚು ಒತ್ತು ನೀಡುವದು.

  • ಹಿಂದೂಧರ್ಮದೊಳಗಿನ ಸಾಮರಸ್ಯ:
    ಹಿಂದೂ ಧರ್ಮದ ವೈವಿಧ್ಯತೆಯ ಒಟ್ಟುಸಾರ ಜಗತ್ತಿನ ಹಿತಕಾಯಲು ಒಂದೇ ಸತ್ಯದ ಸಮಗ್ರ ಅನುಭವದ ವಿಭಿನ್ನ ಘಟ್ಟಗಳನ್ನು ಪ್ರತಿನಿಧಿಸುತ್ತವೆಯೆಂದೂ, ಎಲ್ಲ ದೇವತೆಗಳೂ ಒಂದೇ ಪರಬ್ರಹ್ಮದ ವಿವಿಧ ರೂಪ ಎಂದು ತಿಳಿಸುತ್ತದೆ.

*ಜಾಗತಿಕ ಧರ್ಮಗಳ ನಡುವಣ ಸಾಮರಸ್ಯ:
ಧರ್ಮಗಳ ನಡುವೆ ಭಿನ್ನತೆಗಳಿದ್ದರೂ ಅಂತಿಮ ಗುರಿಯಡೆಗೆ ನಮ್ಮನ್ನು ಕರೆದೊಯ್ಯುತ್ತವೆಯೆಂದು ಹೇಳಿದರು.ಜಗತ್ತಿನ ಎಲ್ಲ ಧರ್ಮಗಳೂ ಏಕೈಕ ಶಾಶ್ವತ ವಿಶ್ವಧರ್ಮದ ಅಭಿವ್ಯಕ್ತಿಗಳೆಂದು ಪ್ರತಿಪಾದಿಸಿದರು.

  • ಪರಿಣತಿ, ದಕ್ಷತೆ, ಸಮೂಹಕಾರ್ಯ:
    ಈ ಗುಣಗಳು ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಿಷನ್ ಗುರುತಿಸಿದೆ. ಈ ತತ್ವಗಳಿಂದಾಗಿಯೇ ಮಿಷನ್ ನ ಎಲ್ಲಾ ಕೆಲಸ ಕಾರ್ಯಗಳು ಸುಲಭ ಸರಳವಾಗಿ ನಡೆಯುತ್ತವೆ. ಇವುಗಳು ಯುವಕರು ಅಳವಡಿಸಿಕೊಳ್ಳುವದು ಯೋಗ್ಯವಾಗಿವೆ.‌

*ಸತ್ಯಸಂಧತೆ, ಪ್ರಾಮಾಣಿಕತೆ, ಪಾರದರ್ಶಕತೆ :
ಸಾರ್ವಜನಿಕ ದೇಣಿಗೆಗಳು ಮತ್ತು ಸರ್ಕಾರದ ಅನುದಾನಗಳ ಮೂಲಕ ಬರುವ ಬಹುಪಾಲು ನಿಧಿಗಳನ್ನು ಸ್ವೀಕರಿಸುವಲ್ಲಿ ಮತ್ತು ಖರ್ಚುಮಾಡುವಲ್ಲಿ ಮಿಷನ್ ಎಲ್ಲ ನಿಯಮ, ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಇದು ಯುವಕರಿಗೆ ಮಾದರಿಯಾಗಿದೆ.

*ರಾಜಕೀಯರಹಿತ ಸಾಮಾಜಿಕ ಬದ್ಧತೆ:
ರಾಮಕೃಷ್ಣ ಮಿಷನ್ ಮನುಕುಲದ ಆಧ್ಯಾತ್ಮಿಕ ಪುನರುಜ್ಜೀವನವನ್ನು ಗುರಿಯಾಗಿಸಿಕೊಂಡಿರುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿರುವುದರಿಂದ ತನ್ನ ಸ್ಥಾನವನ್ನು ಸಕ್ರಿಯ ರಾಜಕಾರಣ ಹಾಗೂ ರಾಜಕೀಯ ಸಂಬಂಧಗಳಿಗೆ ಅತೀತವಾಗಿ ಉಳಿಸಿಕೊಂಡಿದೆ.

*ನಿಸ್ವಾರ್ಥ, ತ್ಯಾಗ, ಪ್ರೇಮ:
ನಿಸ್ವಾರ್ಥತೆಯ ತತ್ವ ‘ದಿವ್ಯತ್ರಯ’ರ ಒಂದು ಪ್ರಮುಖ ಬೋಧನೆಯಾಗಿದ್ದು, ಕರ್ಮ, ಭಕ್ತಿ, ಜ್ಞಾನಗಳ ಮೂರು ಪ್ರಮುಖ ಆಧ್ಯಾತ್ಮಿಕ ಪಥಗಳಲ್ಲಿ ಅದೇ ಮೊದಲ ಹೆಜ್ಜೆಯಾಗಿದೆ. ಸೇವಾ ಚಟುವಟಿಕೆಗಳಲ್ಲಿ ತೊಡಗುವವರು ‘ಸ್ವಯಂಕೀರ್ತಿ’ಗಾಗಿ ಅಲ್ಲ, ಭಗವಂತನಿಗೆ ಮುಡಿಪಾಗಿರುವ ಉನ್ನತ ಕೀರ್ತಿಗಾಗಿ ಎನ್ನುವದು ಅರಿಯಬೇಕು.

  • ಸ್ವಾತಂತ್ರ್ಯ, ಸಮಾನತೆ, ಸೋದರತೆ :
    ಪ್ರಜಾಪ್ರಭುತ್ವದ ಈ ಮೂರು ಮಹಾನ್ ಆದರ್ಶಗಳು – ಅವುಗಳ ಬಗೆಗೆ ಮನುಕುಲ ಶತಶತಮಾನಗಳ ಕಾಲ ಕನಸು ಕಾಣುತ್ತ ಮತ್ತು ಮಾತನಾಡುತ್ತ ಬಂದಿದೆ .ರಾಮಕೃಷ್ಣ ಮಿಷನ್ನಿನ ವಸ್ತು ಶಹಃ ಇದನ್ನು ಅಳವಡಿಸಿಕೊಂಡಿದೆ.

ಇಂಥ ಮಹತ್ವದ ತತ್ವ ಆದರ್ಶಗಳೊಂದಿಗೆ ರಾಮಕೃಷ್ಣ ಮಿಷನ್ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಇದು ದೇಶ ನಿರ್ಮಾಣದಲ್ಲೂ ವೈಕ್ತಿಕ ಹಿತಸಾಧನೆಯಲ್ಲೂ ಪ್ರಗತಿಯತ್ತ ಕೊಂಡೊಯಲು ಉತ್ತಮ ಫಥವನ್ನು ಸೂಚಿಸುತ್ತದೆ. ಆದರೆ, ನಮ್ಮ ಯುವ ಸಮುದಾಯವು ಇಂಥ ಮಹತ್ವದ ದೇಯೊದ್ದೇಶಗಳನ್ನು ಅರಿಯಬೇಕಿದೆ. ಡಂಬಾಚಾರದ ಮೊಜು ಮಸ್ತಿಯಲ್ಲಿ ಮುಳಗಿ ವ್ಯಕ್ತಿತ್ವ ಶೂನ್ಯರಾಗಿ ತಮ್ಮೊಳಗಿನ ಚೈತನ್ಯ ಅರಿಯದೇ ನಿಷ್ಕ್ರೀಯ ಬದುಕು ಸಾಗಿಸುವುದರಲ್ಲೆ ನಿರತರಾಗುವುದು ತರವಲ್ಲ.


ಪ್ರಹ್ಲಾದ್ ವಾ ಪತ್ತಾರ
ಬರಹಗಾರರು
ಯಡ್ರಾಮಿ , ಕಲಬುರ್ಗಿ ಜಿ

Leave a Comment

Your email address will not be published. Required fields are marked *