ಸಿನಿಮ ಸಮಾಚಾರ:ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರು ಹುಡುಗ ಆದಿಲ್ ಜೊತೆ ಸುತ್ತುತ್ತಿದ್ದ ಅವರು, ಅದೇ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.
ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಿಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರಿಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.