ಸಮಗ್ರ ನ್ಯೂಸ್ : ಗಾಂಜಾ ಚಲಾವಣೆ ಮತ್ತು ಸೇವನೆ ಆರೋಪದ ಮೇಲೆ ವೈದ್ಯರು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಐವರು ಯುವಕರು ಮತ್ತು ನಾಲ್ವರು ಯುವತಿಯರನ್ನು ಬಂಧಿಸಲಾಗಿದ್ದು, ಅದರಲ್ಲಿ ಒಬ್ಬರು ತಮಿಳುನಾಡು ಮತ್ತು ಆಂಧ್ರಪ್ರದೇಶದವರು, ಇಬ್ಬರು ಕೇರಳ, ಪಂಜಾಬ್ ಮತ್ತು ದೆಹಲಿಯಿಂದ ಬಂದವರಾಗಿದ್ದು, ಒಬ್ಬರು ಸ್ಥಳೀಯರಾಗಿದ್ದಾರೆ.
ಬಂಧಿತ ಒಂಬತ್ತು ಮಂದಿಯಲ್ಲಿ ವಿದ್ಯಾರ್ಥಿಗಳು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ವೈದ್ಯರು ಇದ್ದಾರೆ. ನಾಲ್ವರು ಯುವತಿಯರು ಎಂಬಿಬಿಎಸ್ ಮತ್ತು ಬಿಡಿಎಸ್ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು, ಐವರು ಪುರುಷರಲ್ಲಿ ಇಬ್ಬರು ವೈದ್ಯಕೀಯ ಅಧಿಕಾರಿಗಳು ಮತ್ತು ಮೂವರು ಎಂಬಿಬಿಎಸ್ ಮತ್ತು ಬಿಡಿಎಸ್ ಓದುತ್ತಿರುವ ವಿದ್ಯಾರ್ಥಿಗಳು.
ಇದಕ್ಕೂ ಮೊದಲು ಜನವರಿ 8 ರಂದು ನೀಲ್ ಕಿಶೋರಿಲಾಲ್ ರಾಮ್‌ಜಿ ಶಾ (35) ಎಂಬ ಆರೋಪಿಯನ್ನು ಬಂಟ್ಸ್ ಹಾಸ್ಟೆಲ್‌ನಿಂದ ಬಂಧಿಸಲಾಗಿದ್ದು, ಆತ ತನ್ನ ಫ್ಲಾಟ್‌ನಲ್ಲಿ ಗಾಂಜಾವನ್ನು ಹೊಂದಿದ್ದು ಅದನ್ನು ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು, ಆತನಿಂದ 50,000 ಮೌಲ್ಯದ 2 ಕೆಜಿ ಗಾಂಜಾ, ಎರಡು ಮೊಬೈಲ್ ಫೋನ್ ಮತ್ತು 7,000 ರೂ ನಗದು ಸೇರಿ 78,000 ರೂ. ವಶಪಡಿಸಿಕೊಂಡಿದ್ದರು.
ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ಮೊದಲು ಬಂಧಿಸಲಾಗಿದ್ದು, ಈತ ಯುಕೆಯ ಪ್ರಜೆಯಾಗಿದ್ದು, ಎನ್ ಆರ್ ಐ ಕೋಟಾದಲ್ಲಿ ಡೆಂಟಲ್ ವಿದ್ಯಾರ್ಥಿಯಾಗಿದ್ದು ಕಳೆದ ಹದಿನೈದು ವರ್ಷಗಳಿಂದಲೂ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನಿಗೆ ಶಿಕ್ಷಣ ಇನ್ನೂ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಗಾಂಜಾ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಒಂಬತ್ತು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.