ಸಮಗ್ರ ನ್ಯೂಸ್: ಬೆಳಕು ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 6,600 ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಬ್‌ಸ್ಟೇಷನ್ ನಿರ್ಮಿಸಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರ ಸುಳ್ಯ ಮತ್ತು 110 ಕೆ.ವಿ. ಮಾಡಾವು-ಸುಳ್ಯ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಸುಳ್ಯದ ಅಂಬಟಡ್ಕ 33/11 ಕೆ.ವಿ. ಉಪ ಕೇಂದ್ರದ ಬಳಿ ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಒಂದು ವಾರದಲ್ಲಿ ಕಾಮಗಾರಿ ಆರಂಭಿಸಿ ಒಂದು ವರ್ಷದಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.
ಜಿಲ್ಲೆಗೆ 11 ಸಬ್‌ಸ್ಟೇಷನ್
ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ 110 ಕೆ.ವಿ. ಸಾಮರ್ಥ್ಯದ 11 ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡುವ ಕಾರ್ಯವಾಗಿದೆ. ಜಿಲ್ಲೆಗೆ ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ವಿದ್ಯುತ್ ಉಪಕೇಂದ್ರಗಳಿಗೆ ಮಂಜೂರಾತಿ ನೀಡಲಾಗುವುದು. ಸುಳ್ಯದ ಸಂಪಾಜೆಯಲ್ಲಿ 33 ಕೆವಿ ಸಬ್‌ಸ್ಟೇಷನ್‌ಗೆ ಜಮೀನು ಗುರುತಿಸಲಾಗಿದೆ. ಚಾರ್ವಾಕದಲ್ಲಿ 33 ಕೆವಿ ಸಬ್‌ಸ್ಟೇಷನ್‌ಗೆ ಕಂದಾಯ ಇಲಾಖೆ ಜಾಗ ಗುರುತಿಸಬೇಕಿದೆ. ಪಂಜದ ನಿಂತಿಕಲ್ಲು, ಜಾಲೂರು ಸೇರಿದಂತೆ ಸುಳ್ಯ ವ್ಯಾಪ್ತಿಯ ಇನ್ನೂ 4 ಕಡೆ ಸಬ್‌ಸ್ಟೇಷನ್‌ಗಳು ನಿರ್ಮಾಣವಾಗಲಿವೆ ಎಂದರು.