ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದ್ದು, ಕರಾವಳಿ ರಾಜಕೀಯದ ಮಟ್ಟಿಗೆ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಹೈಕಮಾಂಡ್ ಹೊಸಮುಖದ ಸೂತ್ರ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಬಾರಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳನ್ನೇ ಇಟ್ಟುಕೊಂಡು ಮುಂದಿನ ಒಂದೆರಡು ದಶಕಗಳ ಕಾಲ ಪಕ್ಷವನ್ನು ಗಟ್ಟಿಗೊಳಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಜಾತಿ, ವಯಸ್ಸು, ವರ್ಚಸ್ಸು ಸೇರಿದಂತೆ ಎಲ್ಲಾ ದೃಷ್ಟಿಕೋನದಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಜೊತೆಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಗಿರುವ ಎಡವಟ್ಟುಗಳು ಪುನರಾವರ್ತನೆ ಆಗದಂತೆ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯನ್ನು ಇರಿಸುತ್ತಿದೆ.
ಹಾಗಾದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಉಳ್ಳಾಲ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸಮುಖಗಳು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದು ಖಚಿತ. ಅದ್ರಲ್ಲೂ ಯುವ ಮುಖಂಡರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ. ಜೊತೆಗೆ ಜಾತಿವಾರು ಲೆಕ್ಕಾಚಾರದಲ್ಲಿಯೂ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :
ಮಂಗಳೂರು : ಯು.ಟಿ ಖಾದರ್
ಮಂಗಳೂರು ದಕ್ಷಿಣ : ಐವನ್ ಡಿಸೋಜ
ಮೂಡಬಿದ್ರಿ : ಮಿಥುನ್ ರೈ
ಬಂಟ್ವಾಳ : ಪದ್ಮರಾಜ್. ಆರ್
ಪುತ್ತೂರು : ಅಶೋಕ್ ಕುಮಾರ್ ರೈ
ಬೆಳ್ತಂಗಡಿ : ರಕ್ಷಿತ್ ಶಿವರಾಂ
ಮಂಗಳೂರು ಉತ್ತರ : ಇನ್ಯಾಯತ್ ಆಲಿ
ಸುಳ್ಯ: ನಂದಕುಮಾರ್
ಕಾಂಗ್ರೆಸ್ ಸಿದ್ದಪಡಿಸಿರುವ ಪಟ್ಟಿ ಬಿಜೆಪಿ ನಾಯಕರ ತಲೆ ಕೆಡಿಸಿದಂತಿದೆ. ಒಂದೊಮ್ಮೆ ಇದೇ ಪಟ್ಟಿ ಬಿಡುಗಡೆಯಾದರೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಬದಲಾಗಬಹುದು ಎನ್ನುತ್ತಿವೆ ಬಿಜೆಪಿಯ ಆಂತರಿಕ ಮೂಲಗಳು. ಇನ್ನು ಕಾಂಗ್ರೆಸ್ ಪಕ್ಷ ಹಳೆಯ ಮುಖಗಳನ್ನು ಬದಲಾಯಿಸಿ, ಹೊಸ ಮುಖಗಳಿಗೆ ಆದ್ಯತೆ ನೀಡಲು ಹೊರಟಿರುವುದು ಕಾಂಗ್ರೆಸ್ ಪಾಳಯದಲ್ಲಿಯೇ ಸಂಚಲನ ಮೂಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.