ಸಮಗ್ರ ನ್ಯೂಸ್: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ. 12ರಂದು ಸರಳ ಸಾಮೂಹಿಕ ವಿವಾಹ “ಸಪ್ತಪದಿ’ ನಡೆಯಲಿದೆ. ವಿವಾಹವಾಗಲು ಬಯಸುವವರು ದೇವಸ್ಥಾನದ ಕಚೇರಿಯಿಂದ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಫೆ.15ರೊಳಗೆ ಮರಳಿಸಬೇಕು.
ವಿವಾಹಕ್ಕೆ ಆಗಮಿಸುವ ಬಂಧುಗಳಿಗೆ, ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗೆ 08257-281224 ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
ವರನಿಗೆ ಹೂವಿನ ಹಾರ, ಪಂಚೆ, ಅಂಗಿ, ಶಲ್ಯ, ಪೇಟ, ಬಾಸಿಂಗ ಇತ್ಯಾದಿಗಳಿಗಾಗಿ ದೇವಸ್ಥಾನದಿಂದ 5 ಸಾವಿರ ರೂ. ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ 10 ಸಾವಿರ ರೂ. ನೀಡಲಾಗುವುದು. 40 ಸಾವಿರ ರೂ. ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡುಗಳನ್ನು ನೀಡಲಾಗುವುದು.
ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ 10 ಸಾವಿರ ರೂ. ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುವುದು. ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಗುವುದು.