ಸಮಗ್ರ ನ್ಯೂಸ್: ಸಮ್ಮಿಶ್ರ ಸರ್ಕಾರವನ್ನ ಕೆಡವಿ ಶಾಸಕರು ಮುಂಬೈನಲ್ಲಿ ಇದ್ದಾಗ, ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನ ಸಪ್ಲೈ ಮಾಡಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಸ್ ಟಿ. ಸೋಮಶೇಖರ್ ಕುಣಿಯಲಾರದವನಿಗೇ ನೆಲ ಡೊಂಕು ಎಂಬಂತೆ, ಚುನಾವಣೆಯನ್ನು ಗೆಲ್ಲಲು ಆಗದ ಸ್ಥಿತಿಯಲ್ಲಿರುವ ಕುಮಾರಸ್ವಾಮಿ 3 ವರ್ಷ ಸುಮ್ಮನಿದ್ದು ಈಗ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಆಗಿದ್ದಾಗ ಕುಮಾರಸ್ವಾಮಿ ಸರಿಯಾಗಿ ಆಡಳಿತ ನಡೆಸಲಿಲ್ಲ, ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ಆಡಳಿತ ಮಾಡಿದ್ದರಿಂದ ನಾವೆಲ್ಲ ಬೇಸತ್ತು ಹೋಗಿದ್ದೆವು. ಇವರು ಸರಿಯಾಗಿ ಆಡಳಿತ ನಡೆಸಿದ್ದರೆ ಐದು ವರ್ಷ ಅವರೆ ಮುಖ್ಯಮಂತ್ರಿ ಆಗಿ ಇರುತ್ತಿದ್ದರು. ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದು ಕುಮಾರಸ್ವಾಮಿಗೆ ಎಸ್ ಟಿ ಸೋಮಶೇಖರ್ ಪ್ರತಿ ಸವಾಲು ಹಾಕಿದರು.
ಇದಕ್ಕೆ ಟಾಂಗ್ ನೀಡಿರುವಂತ ಕುಮಾರಸ್ವಾಮಿ, ಸೋಮಶೇಖರ್ ಜೊತೆಗೆ ಸ್ಯಾಂಟ್ರೋ ರವಿ ಇರುವಂತ ವೀಡಿಯೋ ರಿಲೀಸ್ ಮಾಡಿದ್ದಾರೆ.
ಇಂದು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾದಲ್ಲಿ ತಮ್ಮ ಮೊಬೈಲ್ ನಲ್ಲಿಯೇ ಸ್ಯಾಂಟ್ರೋ ರವಿ ಜೊತೆಗೆ ಸಚಿವ ಸೋಮಶೇಖರ್ ಇರುವ ವೀಡಿಯೋ ತೋರಿಸಿದರು. ಈ ವೀಡಿಯೋದಲ್ಲಿ ಸಚಿವರು ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಬೀದರ್ನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯ ವೇಳೆ ಮಾತನಾಡಿದ ಅವರು, ಅಮೀತ್ ಶಾ, ನಡ್ಡಾ ಬಂದರೆ ಯಾವ ಹೋಟೆಲ್ನಲ್ಲಿ ಹಾಲ್ಟ್ ಮಾಡೋದು. ಇವರು ಮೀಟಿಂಗ್ ಮಾಡುತ್ತಾರಲ್ಲ ಯಾವ ಹೋಟೆಲ್ನಲ್ಲಿ. ಅಮೀತ್ ಶಾ ಮೊನ್ನೆ ಬಂದಿದ್ರಲ್ಲ ಎಲ್ಲಿ ಇದ್ರು ಎಂದು ಪ್ರಶ್ನಿಸಿದ ಅವರು, ನನಗೆ ಗವರ್ನಮೆಂಟ್ ಹೌಸ್ ಕೊಡದಿದ್ದಾಗ. ಸಿದ್ದರಾಮಯ್ಯ ಆ ಮನೆ ಬೇಕು ಎಂದು ಅವರು ಅಲ್ಲೇ ಮುಂದುವರೆದರು. ಅದಕ್ಕಾಗಿ ಹೋಟೆಲ್ ನಲ್ಲಿ ಇದ್ದೆ. ವಿರಾಮ ತೆಗೆದುಕೊಳ್ಳುವುದಕ್ಕೆ ನಾನು ಹೋಟೆಲ್ಗೆ ಹೋಗಿದ್ದೇನೆ. ಇವರ ಥರಾ ಏನು ಆಟ ಆಡೋಕೆ ಹೋಗಿದ್ನಾ ಎಂದು ಪ್ರಶ್ನಿಸಿದರು.
ಸೋಮಶೇಖರ್ ವಿರುದ್ಧ ವಾಗ್ಧಾಳಿ ನಡೆಸಿದಂತ ಅವರು, ಕಳ್ಳನ ಮನಸ್ಸು ಹುಳ್ಳುಳ್ಳಗೆ ಅಂದರೇ ಇವರಿಗ್ಯಾಕೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು. ಎಸ್ ಟಿ. ಸೋಮಶೇಖರ್ ಕುಣಿಯಲಾರದ ವೇಶ್ಯೆಗೆ ನೆಲ ಡೊಂಕು ಎಂದು ಮೈತ್ರಿ ಸರ್ಕಾರದ ಬಗ್ಗೆ ಹೇಳಿದ್ದಕ್ಕೆ ತಿರುಗೇಟು ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಭಾರತ ಮಾತೆಯ ಮುಂದೆ ನಿಂತು ನಮಸ್ತೆ ಸದಾ ವತ್ಸಲೆ ಎಂದು ಹೇಳುತ್ತಾರೆ. ಆದರೆ ಈ ರೀತಿಯ ಅವಾಚ್ಯ ಶಬ್ದಗಳನ್ನು ಬಳಸಿ ಅವರ ಮೂಲ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.