ಸಮಗ್ರ ನ್ಯೂಸ್: ನಾಗರೀಕರು ಮನವಿ ಕೊಟ್ಟರೆ ಯಾವುದೇ ಕೆಲಸಗಳು ಆಗುವುದಿಲ್ಲ. ಕಾಮಗಾರಿ ನಡೆಸಲು ಸರ್ಕಾರ ಹಣ ಬಿಡುಗಡೆ ಮಾಡಬೇಕು, ಮನವಿ ಕೊಟ್ಟ ಮಾತ್ರಕ್ಕೆ ಕೆಲಸವಾಗದು, ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸಚಿವರ ಈ ಒಟ್ಟಾರೆ ಹೇಳಿಕೆಯಿಂದ ಕಡಬ ತಾಲೂಕಿನ ಬಲ್ಯ ಗ್ರಾಮದ ಜನರಿಗೆ ನಾವು ಬೇರೆ ಪಕ್ಷದ ಶಾಸಕನೊಂದಿಗೆ ಮಾತನಾಡ್ತಿದ್ದೆವೆಯೋ ಎಂಬ ಅನುಮಾನ ಕಾಡಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರ ಆಕ್ರೋಶ ಅಲ್ಲಲ್ಲಿ ಪ್ರಕಟವಾಗತೊಡಗಿದ್ದು, ಗುದ್ದಲಿ ಪೂಜೆಗೆಂದು ಆಗಮಿಸಿದ ಸುಳ್ಯ ಶಾಸಕ , ಸಚಿವ ಎಸ್.ಅಂಗಾರ ಅವರಿಗೆ ‘ಮೊದಲು ಸಮಸ್ಯೆ ಬಗೆಹರಿಸಿ, ಬಳಿಕ ಗುದ್ದಲಿ ಪೂಜೆ ಮಾಡಿ’ ಎಂದು ಗ್ರಾಮಸ್ಥರು ತಾಕೀತು ಮಾಡಿದ ಘಟನೆ ಕಡಬ ಸಮೀಪದ ಬಲ್ಯ ಎಂಬಲ್ಲಿ ಸೋಮವಾರ ನಡೆದಿದೆ.
ಅಂಗಾರ ಅವರು ಪಕ್ಷದ ಪ್ರಮುಖರೊಡಗೂಡಿ 85 ಲಕ್ಷ ರು. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸಕ್ಕೆ ಬಲ್ಯಕ್ಕೆ ಆಗಮಿಸಿದ್ದರು. ಬಲ್ಯದ ರಸ್ತೆಯೊಂದರ ಅಭಿವೃದ್ಧಿಗೆಂದು ಸತತ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಸ್ಪಂದನೆ ತೋರದ ಜನಪ್ರತಿನಿಧಿಗಳ ಮೇಲಿನ ಆಕ್ರೋಶವನ್ನು ಎದುರಿಸಿದರು. ಮೊದಲು ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಅಂತರ ಕಾಯ್ದುಕೊಂಡಿದ್ದ ಅಲ್ಲಿನ ನಿವಾಸಿಗರು ಬಳಿಕ ಶಿಲಾನ್ಯಾಸದ ಸ್ಥಳಕ್ಕೆ ಬಂದು ತಮ್ಮ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ವೇಳೆ ಉತ್ತರಿಸಿದ ಸಚಿವ ಅಂಗಾರ, ಯಾರು ಮನವಿ ಕೊಟ್ಟರೂ, ಕೊಡದಿದ್ದರೂ ನಾನೇನು ಮಾಡಬೇಕೋ ಅದನ್ನು ಮಾಡುವೆ. ನೀವು ಮನವಿ ಕೊಟ್ಟಮಾತ್ರಕ್ಕೆ ಕಾಮಗಾರಿಯ ಕೆಲಸ ಮಾಡಲು ಹಣ ಯಾರು ಕೊಡಬೇಕು? ಸರ್ಕಾರ ತಾನೆ? ಸರ್ಕಾರ ದುಡ್ಡು ಕೊಟ್ಟರೆ ಕಾಮಗಾರಿ ಮಾಡಿಸುವೆ ಎಂದು ಉತ್ತರಿಸಿದರು. ಆಗ ಅಲ್ಲಿ ಜಮಾಯಿಸಿದ ಮಂದಿ ವಾಗ್ವಾದ ನಡೆಸಿ, ಜೀವಮಾನದುದ್ದಕ್ಕೂ ಬಿಜೆಪಿಗೆ ಮತ ಹಾಕಿದ್ದರೂ ಯಾವುದೇ ಸ್ಪಂದನ ಇಲ್ಲ. ಮುಂದಕ್ಕೆ ಓಟು ಕೇಳಲು ಬನ್ನಿ ಎಂದು ಎಚ್ಚರಿಸಿ ಹೇಳುತ್ತಾ ಸ್ಥಳದಿಂದ ನಿರ್ಗಮಿಸಿದರು.
ಬಳಿಕ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಅಸಮಾಧಾನಿತ ಮಂದಿಯನ್ನು ಕರೆದು ಸಮಾಧಾನಪಡಿಸಲು ಯತ್ನಿಸಿದರಾದರೂ ತನ್ನ ಕ್ಷೇತ್ರದ ಮತದಾರ ವ್ಯಕ್ತಪಡಿಸುವ ಆಕ್ರೋಶ ಅಸಮಾಧಾನವನ್ನು ಕೇಳಿಸಿಕೊಳ್ಳಲೂ ಸಹನೆ ಇಲ್ಲದ ಅಂಗಾರ ರವರ ಇಂದಿನ ವರ್ತನೆ ಮುಂದಿನ ಚುನಾವಣೆಯ ದೃಷ್ಟಿಯಿಂದ ದುಷ್ಪರಿಣಾಮಕಾರಿಯಾಗಿ ಪರಿಣಮಿಸುವ ಸಾಧ್ಯತೆ ಮೂಡಿಸಿದೆ. ನಾಗರಿಕರ ಆಕ್ರೋಶದ ನಡುವೆಯೂ ಮೂರು ರಸ್ತೆಗಳ ಅಭಿವೃದ್ಧಿಗೆ 85 ಲಕ್ಷ ರು. ಅನುದಾನ ಇರಿಸಿ ಶಂಕುಸ್ಥಾಪನೆ ನಡೆಸಲಾಯಿತು.