ಸಮಗ್ರ ನ್ಯೂಸ್: ಕೊಣಾಜೆ ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿದ ಏಳು ಮಂದಿಯ ಎನ್ ಐಎ ತಂಡ ಶಿವಮೊಗ್ಗದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಜತೆಗೆ ಸಂಪರ್ಕ ಹೊಂದಿದ್ದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಉಡುಪಿ ಮೂಲದ ರಿಹಾನ್ ಶೇಖ್ ವಶದಲ್ಲಿರುವಾತ. ಈತ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕವನ್ನು ಸ್ಪೋಟಿಸುತ್ತಿದ್ದ ಪ್ರಕರಣದಲ್ಲಿ ಐಸಿಸ್ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದರೆನ್ನಲಾದ ಬಂಧಿತ ಶಂಕಿತ ಉಗ್ರರಾದ ಮಾಝ್ ಮುನೀರ್ ಎಂಬಾತನ ಜೊತೆಗೆ ನಿರಂತರ ಸಂಪರ್ಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿ ಭಾಗಿಯಾಗಿದ್ದರೆಂಬ ವಿಚಾರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಪ್ರಕರಣದಲ್ಲಿ ಸೈಯದ್ ಯಾಸೀನ್, ಮಾಝ್ ಮುನೀರ್, ಶಾರೀಕ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿತ್ತು. ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಕೊಣಾಜೆಯ ನಡುಪದವು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು.