ಸಮಗ್ರ ನ್ಯೂಸ್: ‘ ಚುನಾವಣಾ ಪ್ರಚಾರದಲ್ಲಿ ರಸ್ತೆಗುಂಡಿ, ಮೋರಿ ಇತ್ಯಾದಿ ವಿಚಾರಗಳನ್ನು ಬಿಟ್ಟು ಲವ್ ಜಿಹಾದ್ ಕುರಿತು ಗಮನಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಬೇಜವಾಬ್ದಾರಿ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. 2014ರ ನಂತರ ಎಲ್ಲೂ ಈ ದೇಶದಲ್ಲಿ ಬಾಂಬ್ ಬ್ಲಾಸ್ಟ್‌ಗಳು ಆಗಿಲ್ಲ. ಅದು ನರೇಂದ್ರ ಮೋದಿ ತಾಕತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ನಡೆದ ಭೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಆಡಿರುವ ಮಾತುಗಳು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ದ.ಕ ಜಿಲ್ಲೆಗೆ ಭಯೋತ್ಪಾದನೆಯ ಆತಂಕ ಇದೆ. ಅದರ ನಿವಾರಣೆಗೆ ಒಂದೇ ಒಂದು ದಾರಿ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಎಂದರು. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ತಂದಿದ್ದೇವೆ. ಹಾಗೆ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ನಿಮ್ಮ ಗಮನ ರಸ್ತೆ ಗುಂಡಿಗಳತ್ತ ಬೇಡ. ಬದಲಾಗಿ ಲವ್ ಜಿಹಾದ್ನತ್ತ ಇರಲಿ. ನಿಮ್ಮ ಮಕ್ಕಳನ್ನು ಲವ್ ಜಿಹಾದ್ನಿಂದ ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಭಯೋತ್ಪಾದಕ ಪಕ್ಷ ಎಂಬುದು ಎಲ್ಲರಿಗೂ ಮನವರಿಕೆ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಲಿವೆ. ಹೀಗಾಗಿ ಕಾಂಗ್ರೆಸ್ಗೆ ಮತ ನೀಡುವ ಮೊದಲು ಜನರು ಯೋಚಿಸಬೇಕಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಳಿನ್ ಕುಮಾರ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಕ್ತಿಯಿಸಿ, ಬಿಜೆಪಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಗೆ ‘ಅಭಿವೃದ್ಧಿ’ ಬೇಕಾಗಿಲ್ಲ. ಬಿಜೆಪಿಗೆ ‘ರಸ್ತೆ’ ಬೇಡ. ಬಿಜೆಪಿಗೆ ಒಳಚರಂಡಿ ಬೇಕಿಲ್ಲ. ಬಿಜೆಪಿಗೆ ಉದ್ಯೋಗ ಬೇಕಾಗಿಲ್ಲ. ಬಿಜೆಪಿಗೆ ಬೇಕಾಗಿರುವುದು ಲವ್ ಜಿಹಾದ್ ಮಾತ್ರ. ಬಿಜೆಪಿಗೆ ಬಾಗಿಲು ತೋರಿಸುವ ಸಮಯ ಇದಾಗಿದೆ’ ಎಂದು ತಿಳಿಸಿದ್ದಾರೆ.
ಮೋದಿಯವರ 8 ವರ್ಷ, ಬಿ.ಎಸ್.ಯಡಿಯೂರಪ್ಪ ಅವರ 2 ವರ್ಷ, ಬೊಮ್ಮಾಯಿಯವರ 1.5 ವರ್ಷದ ಆಡಳಿತದ ನಂತರವೂ ಅಭಿವೃದ್ಧಿ ವಿಚಾರಗಳ ಬದಲು ಕೋಮುಕಲಹದ ರಾಜಕಾರಣದ ಬಿಜೆಪಿಯ ಗುಪ್ತ ಕಾರ್ಯಸೂಚಿ ನಳಿನ್‍ಕುಮಾರ್ ಕಟೀಲ್ ಅವರ ಬಾಯಲ್ಲಿ ಹೊರಬಂದಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಬಿಜೆಪಿಯು ನಿರ್ಲಜ್ಜತನ ಹಾಗೂ ಅನೈತಿಕ ರಾಜಕಾರಣದ ಪರಮಾವಧಿ ತಲುಪಿದೆ. ಬಿಜೆಪಿ ಎಂದೂ ಜನಪರ, ಅಭಿವೃದ್ಧಿಪರ ರಾಜಕಾರಣ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಗಾರಿದ್ದಾರೆ.