ಸಮಗ್ರ ನ್ಯೂಸ್: ಭಾರತ್ ಜೋಡೋ ಯಾತ್ರೆ ಯುಪಿಗೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕಿ ಮತ್ತು ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಅದಕ್ಕೆ ಸೇರಿಕೊಂಡರು. ಈ ವೇಳೆ ವೇದಿಕೆ ಮೇಲೆಯೇ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ರಾಹುಲ್ ಅಪ್ಪಿ ಮುತ್ತಿಟ್ಟಿದ್ದು, ವಿಡಿಯೋ ಸಧ್ಯ ವೈರಲ್ ಆಗ್ತಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಒಟ್ಟಿಗೆ ವೇದಿಕೆ ಹಂಚಿಕೊಂಡು ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿಯನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು.
ಭಾರತ್ ಜೋಡೋ ಯಾತ್ರೆಯ ಒಂಬತ್ತು ದಿನಗಳ ಚಳಿಗಾಲದ ವಿರಾಮದ ನಂತರ, ಅದು ಉತ್ತರ ಪ್ರದೇಶಕ್ಕೆ ಪ್ರಯಾಣಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ತಮ್ಮ ಸಹೋದರ ಮತ್ತು ಪಕ್ಷದ ಸಂಸದ ರಾಹುಲ್ ಗಾಂಧಿಯನ್ನ ಹೊಗಳಿದ್ದಾರೆ. ಯಾತ್ರೆಯು ಯುಪಿ ಪ್ರವೇಶಿಸಿದ ನಂತ್ರ ಲೋನಿ ಗಡಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ‘ರಾಹುಲ್ ಗಾಂಧಿ ಅವರು ಸತ್ಯದ ಗುರಾಣಿಯನ್ನ ಧರಿಸಿರುವುದರಿಂದ ಅವರಿಗೆ ಚಳಿಯಿಲ್ಲ’ ಎಂದು ಹೇಳಿದರು.
ಅದಾನಿ, ಅಂಬಾನಿ ಎಲ್ಲರನ್ನೂ ಖರೀದಿಸಿದ್ದಾರೆ ಆದರೆ ನನ್ನ ಸಹೋದರನನ್ನ ಎಂದಿಗೂ ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಸತ್ಯದ ಪರವಾಗಿ ನಿಂತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಸರ್ಕಾರ ತನ್ನೆಲ್ಲ ಶಕ್ತಿಯನ್ನೂ ಇಟ್ಟು ಕೋಟಿಗಟ್ಟಲೆ ಖರ್ಚು ಮಾಡಿ ಆತನ ಪ್ರತಿಷ್ಠೆಯನ್ನು ಹಾಳುಗೆಡವಿತು, ಆದರೆ ಯೋಧನಾದ ಅವನು ಸತ್ಯದ ಹಾದಿಯಿಂದ ವಿಮುಖನಾಗಲಿಲ್ಲ ಎಂದರು.