ಸಮಗ್ರ ನ್ಯೂಸ್: ಖೋಟಾ ನೋಟು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕದ್ರಿ ಠಾಣೆಯ ಪೊಲೀಸರು ನಂತೂರಿನ ಬಳಿ ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ₹ 500 ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದು, ಅದರ ಮೊತ್ತ ₹ 4.50 ಲಕ್ಷ ಎಂದು ತಿಳಿದುಬಂದಿದೆ.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (32) ಮತ್ತು ಮಂಗಳೂರು ಜೆಪ್ಪು ನಿವಾಸಿ ರಜೀಮ್ ಅಲಿಯಾಸ್ ರಾಫಿ (31) ಬಂಧಿತ ಆರೋಪಿಗಳು.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಪೊಲೀಸರು ನಂತೂರು ವೃತ್ತದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡ ಆರೋಪಿಗಳು ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಅವರ ಈ ನಡೆಯಿಂದ ಅನುಮಾನಗೊಂಡ ಪೊಲೀಸ್ ಸಿಬ್ಬಂದಿ ಅವರನ್ನು ಬೆನ್ನಟ್ಟಿದ್ದರು. ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ₹ 4.50 ಲಕ್ಷ ಮೊತ್ತದ ₹ 500 ಮುಖಬೆಲೆಯ ಖೋಟಾ ನೋಟುಗಳು ಅವರ ಬಳಿ ಪತ್ತೆಯಾಗಿದ್ದವು’ ಎಂದರು.
ಆರೋಪಿಗಳ ಪೈಕಿ ನಿಜಾಮುದ್ದೀನ್ ವಿಟ್ಲ ಠಾಣೆಯ ವ್ಯಾಪ್ತಿಯಲ್ಲಿ 2015ರಲ್ಲಿ ನಡೆದ ಕೊಲೆ ಪ್ರಕರಣ, ನಗರದ ಜೈಲಿನಲ್ಲಿ 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣ, 2017ರಲ್ಲಿ ಕುಶಾಲನಗರದಲ್ಲಿ ನಡೆದಿದ್ದ ಸುಲಿಗೆ ಪ್ರಕರಣ, 2018ರಲ್ಲಿ ಪುತ್ತೂರು ನಗರ ಠಾಣೆಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲೂ ಆರೋಪಿಯಾಗಿದ್ದ. ಉರ್ವ ಠಾಣೆಯ ವ್ಯಾಪ್ತಿಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ರಾಫಿ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.