ಸಮಗ್ರ ನ್ಯೂಸ್: ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲಾ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ.
ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಂಡರೆ ನೀವು ಯಾವತ್ತೂ ಅದನ್ನು ಬಳಸದೆ ಇರಲ್ಲ.
ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ ಅನಗತ್ಯ ವಿಷ ಪದಾರ್ಥಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸಿ ಅರ್ಜೀರ್ಣ ಸಮಸ್ಯೆಯನ್ನು ದೂರ ಮಾಡುತ್ತದೆ.
ಅತಿಸಾರಕ್ಕೆ ಪರಿಹಾರ: ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದೆ. ಈ ಅಂಶವು ದೇಹದಲ್ಲಿ ಸಾಮಾನ್ಯ ಪ್ರಮಾಣದಲ್ಲಿದ್ದರೆ ಅತಿಸಾರದ ಸಮಸ್ಯೆ ತಲೆದೂರುವುದಿಲ್ಲ. ಹೀಗಾಗಿ ಕರಿಬೇವನ್ನು ಅತಿಸಾರದ ಮನೆಮದ್ದು ಎನ್ನಬಹುದು.
ನೆಗಡಿ, ಕೆಮ್ಮಿಗೂ ಉತ್ತಮ: ಆಹಾರದಲ್ಲಿ ಕರಿಬೇವಿನ ಬಳಕೆಯಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಕೆಮ್ಮು, ನೆಗಡಿ ಅಸ್ತಮಾದಂತಹ ಸಮಸ್ಯೆಗಳು ದೂರವಾಗುತ್ತವೆ.
ರಕ್ತಹೀನತೆಗೆ ಪರಿಹಾರ: ಕರಿಬೇವಿನಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಹಾಗೆಯೇ ಐರನ್ ಅಂಶವು ಈ ಎಲೆಗಳಿರುತ್ತವೆ. ಹೀಗಾಗಿ ಇದನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಿಸಬಹುದು.
ಮಧುಮೇಹ ನಿಯಂತ್ರಣ: ಕರಿಬೇವು ಎಲೆಗಳಲ್ಲಿ ಆಯಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿರುತ್ತದೆ. ಇದರ ನಿಯಮಿತ ಬಳಕೆಯು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಮೂಲಕ ಮಧುಮೇಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮೂತ್ರ ಸಂಬಂಧಿ ಕಾಯಿಲೆಗೆ ಪರಿಹಾರ: ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದು ಕೂಡ ಉತ್ತಮ. ಕರಿಬೇವಿನ ಕಷಾಯ ಕುಡಿಯುವುದರಿಂದ ಮೂತ್ರ ಸಂಬಂಧಿಸಿ ಕಾಯಿಲೆಗಳು ದೂರವಾಗುತ್ತವೆ.
ಬಿಳಿ ಕೂದಲು ಸಮಸ್ಯೆ: ದೇಹದದಲ್ಲಿ ಪೋಷಕಾಂಶಗಳ ಕೊರತೆಯಾದರೆ ಸಣ್ಣ ಪ್ರಾಯದಲ್ಲೇ ಕೂದಲು ಬಿಳಿಯಾಗಿಬಿಡುತ್ತದೆ. ಇಂತಹ ಸಮಸ್ಯೆಯನ್ನು ಕರಿಬೇವಿನ ಆಹಾರದಿಂದ ತಡೆಯಬಹುದು. ಹಾಗೆಯೇ ಕೂದಲ ಬೆಳವಣಿಗೆಗೂ ಕರಿಬೇವಿನ ಎಲೆಗಳು ಸಹಕಾರಿಯಾಗಿದೆ.
ಕೊಲೆಸ್ಟ್ರಾಲ್ ನಿಯಂತ್ರಣ: ಆಹಾರದಲ್ಲಿ ಕರಿಬೇವಿನ ಬಳಕೆಯು ದೇಹದಲ್ಲಿನ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಹಸಿ ಸೊಪ್ಪಿನ ರಸವನ್ನು ಜಜ್ಜಿ ಅಥವಾ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ಸಾಕು, ಮಳಿಗೆಗಳಿಂದ ತರುವ ಕ್ರೀಮ್ ನ ಅವಶ್ಯಕತೆಯೇ ಬರುವುದಿಲ್ಲ.ಎಣ್ಣೆ ತ್ವಚೆ ಹೊಂದಿರುವವರ ಮುಖದಲ್ಲಿ ಇರುವ ಕಪ್ಪು ಕಲೆಗಳನ್ನು ದೂರಮಾಡಲು ಕರಿಬೇವನ್ನು ಬಳಸಲಾಗುತ್ತದೆ. ಇದು ತ್ವಚೆಯ ಮೇಲೆ ರಂಧ್ರಗಳಾಗದಂತೆ ನೋಡಿಕೊಳ್ಳುತ್ತವೆ. ಮೊಡವೆಗಳನ್ನು ದೂರ ಮಾಡುತ್ತವೆ. ಕಣ್ಣಿನ ಕೆಳಭಾಗ ಕಪ್ಪಾಗಿರುವುದನ್ನು ಸರಿಮಾಡಿ ನಿಮ್ಮ ತ್ವಚೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬೇವಿನ ಸೊಪ್ಪಿನಲ್ಲಿ ಆಂಟಿ ಸೆಪ್ಟಿಕ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣವಿದ್ದು. ಇದು ಮೊಡವೆಗಳನ್ನು ಬಹುಬೇಗ ದೂರ ಮಾಡುತ್ತದೆ. ಮುಖದ ಮೇಲಿನ ಸಿಪ್ಪೆ ಏಳುವುದಕ್ಕೂ, ಗುಳ್ಳೆಗಳಾಗುವುದು ನಿಲ್ಲುವುದಕ್ಕೂ ಇದು ಹೇಳಿ ಮಾಡಿಸಿದ ಔಷಧವಾಗಿದೆ.