Ad Widget .

ಇಂದು ‘ವೈಕುಂಠ ಏಕಾದಶಿ’| ಭಗವಂತನ ಅನುಗ್ರಹಕ್ಕಿದು ಸಕಾಲ

ಸಮಗ್ರ ನ್ಯೂಸ್: ಇಂದು ‘ವೈಕುಂಠ ಏಕಾದಶಿ’. ಹಲವು ದೇವಸ್ಥಾನಗಳಲ್ಲಿ ಭಕ್ತರು ಮುಂಜಾನೆಯಿಂದಲೇ ಸಡಗರದಿಂದ ಭಗವಂತನ ದರ್ಶನ ಪಡೆಯುತ್ತಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ‘ವೈಕುಂಠ ಏಕಾದಶಿ’ ಎನ್ನುತ್ತಾರೆ. ಈ ಏಕಾದಶಿ ಅತಿ ವಿಶೇಷವಾದದ್ದು. ಏಕೆಂದರೆ ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ ಹಾಗೂ ಶ್ರೀಮನ್ನಾರಾಯಣನು ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಡುವ ದಿನವೂ ಆಗಿದ್ದರಿಂದ ಇದನ್ನು ‘ಮುಕ್ಕೋಟಿ ಏಕಾದಶಿ’ ಎಂತಲೂ ಕರೆಯುವರು.

Ad Widget . Ad Widget .

ವೈಕುಂಠ ಏಕಾದಶಿ ದಿನ ವಿಷ್ಣು ದೇವಾಲಯಗಳಲ್ಲಿ ಈಶಾನ್ಯದ ಬಾಗಿಲನ್ನು ತೆರೆಯುತ್ತಾರೆ. ಅಂದು ಭಕ್ತರು ಪೂರ್ವ ಬಾಗಿಲಿನಿಂದ ದೇವಾಲಯ ಪ್ರವೇಶಿಸಿ ಉತ್ತರ ಬಾಗಿಲಿನಲ್ಲಿರುವ ಶ್ರೀಮನ್ನಾರಾಯಣನ ದರ್ಶನ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಉತ್ತರ ಬಾಗಿಲಿನ ಮೂಲಕ ದರ್ಶನ ಆಗಿರುವ ಕಾರಣ ವಿಶೇಷ ಮಹತ್ವದ ದಿನ.

Ad Widget . Ad Widget .

ಶ್ರೀ ವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಎಲ್ಲವನ್ನೂ ವ್ಯಾಪಿಸಿಕೊಂಡಿರುವನು ಮತ್ತು ಎಲ್ಲ ವಸ್ತುವಿನಲ್ಲೂ ಅಂತರ್ಗತನಾಗಿರುವನು ಎಂದು. ವಿಷ್ಣುವಿನ ಮತ್ತೊಂದು ಹೆಸರು ‘ನಾರಾಯಣ’. ಈ ಹೆಸರಿನ ಒಂದೊಂದು ಅಕ್ಷರದಲ್ಲೂ ವಿಶೇಷತೆಯಿದೆ.

ಏಕಾದಶಿ ಎಂದರೆ ಹನ್ನೊಂದು. ಐದು ಕಮೇಂದ್ರಿಯ, ಐದು ಜ್ಞಾನೇಂದ್ರಿಯ ಮತ್ತು ಮನಸ್ಸು, ಧರ್ಮ, ಕರ್ಮ, ಜ್ಞಾನ, ಸಾಧನ ಕರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆಯೇ ಏಕಾದಶಿ. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಆ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು. ಏಕಾದಶಿ ಎನ್ನುವ ದೇವಿ ವಿಷ್ಣುವಿನಿಂದ ಉದ್ಭವಳಾಗಿ ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣುವು ಏನಾದರೂ ವರ ಕೇಳು ಎಂದಾಗ ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರುಗಳ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು ಎಂದು ಕೇಳುತ್ತಾಳೆ. ಅದಕ್ಕೆ ವಿಷ್ಣುವು ಆಗಲಿ ಎಂದು ವರವನ್ನು ನೀಡುತ್ತಾನೆಂದು ಭವಿಷ್ಯೋತ್ತರ ಪುರಾಣದಲ್ಲಿದೆ. ‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ‘ಉಪವಾಸ’ದ ಅರ್ಥ. ಆ ದಿನ ಯಾರು ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ, ಪೂಜೆ ಮಾಡಿ ಜಾಗರಣೆ ಮಾಡುತ್ತಾರೋ ಅವರಿಗೆ ಎಲ್ಲ ಸೌಭಾಗ್ಯವನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು.

ಯಾರ ಜಾತಕದಲ್ಲಿ ಬುಧ ಗ್ರಹವು ನೀಚಸ್ಥಾನದಲ್ಲಿದ್ದರೆ ಅಥವಾ ಪಾಪಗ್ರಹಗಳ ಜೊತೆಯಲ್ಲಿದ್ದರೆ ಅಥವಾ ಪಾಪಗ್ರಹಗಳ ದೃಷ್ಟಿಗೆ ಒಳಗಾಗಿದ್ದರೆ ಅಂಥವರು ವೈಕುಂಠ ಏಕಾದಶಿ ದಿನ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಬುಧ ಗ್ರಹದ ಅನುಗ್ರಹ ಪಡೆಯಬಹುದು.

ವಸಿಷ್ಠರು, ಎಲ್ಲ ದೇವಾನುದೇವತೆಗಳು, ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು, ಶ್ರೀ ರಾಘವೇಂದ್ರ ಸ್ವಾಮಿಗಳು, ದಾಸ ಶ್ರೇಷ್ಠರುಗಳು ಏಕಾದಶಿ ವ್ರತ ಮಾಡಿ ಮೋಕ್ಷ ಪಡೆದಿರುವರು.

ಇಂತಹ ಪುಣ್ಯ ದಿನದಂದು ನಾವೂ ಭಗವಂತನ ನಾಮಸ್ಮರಣೆ ಮಾಡಿ ಮುಕ್ತಿಯನ್ನು ಪಡೆಯೋಣ. ಲೋಕಾ ಸಮಸ್ತಾ ಸುಖಿನೋ ಭವಂತು…

Leave a Comment

Your email address will not be published. Required fields are marked *