Ad Widget .

ಸೀಬೆ ಎಂಬ ಅಮೃತಫಲ| ರುಚಿಯಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ

ಸಮಗ್ರ ನ್ಯೂಸ್: ಸೀಬೆ ಎಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ರುಚಿ ಜೊತೆಗೆ ಔಷದೀಯ ಗುಣ ಹೊಂದಿರುವ ‌ಫಲ. ಸೀಬೆಗೆ ಇನ್ನೊಂದು ಹೆಸರು ಪೇರಲ. ಮಾಗಿದಾಗ ವಿಶಿಷ್ಟ ಪರಿಮಳ ಹರಡುತ್ತದೆ. ಸಿಹಿ, ಹುಳಿ, ಒಗರು ರುಚಿಯನ್ನು ಹೊಂದಿರುವ ಸೀಬೆಗೆ ಆಯುರ್ವೇದದಲ್ಲೂ ಪ್ರಮುಖ ಸ್ಥಾನವಿದೆ.

Ad Widget . Ad Widget .

ಸೀಬೆಗೆ ಸಂಸ್ಕೃತದಲ್ಲಿ ಅಮೃತಫಲಂ ಎಂದರೆ, ಹಿಂದಿಯಲ್ಲಿ ಅಮೃದ್, ತೆಲುಗಿನಲ್ಲಿ ಜಾಮ, ತಮಿಳಿನಲ್ಲಿ ಕೊಯ್ಯಾಪಳಂ ಹಾಗೂ ಇಂಗ್ಲಿಷ್‌ನಲ್ಲಿ ಗೋವಾ ಎಂದು ಕರೆಯುತ್ತಾರೆ. ಸೀಬೆ ಹಣ್ಣಿನಲ್ಲಿ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟಿವೆ. ಹಣ್ಣು ದೊರೆಯುವ ಅವಧಿಯಲ್ಲಿ ಯಥೇಚ್ಛವಾಗಿ ಬಳಸಿ ಲಾಭ ಹೊಂದಬೇಕು. ಅತ್ಯಧಿಕ ಔಷಧೀಯ ಗುಣವಿರುವ ಇದು ಹಿತ್ತಲಗಿಡ. ಇದರ ಬೆಲೆಯೂ ಕಡಿಮೆಯಿದ್ದು, ಆರೋಗ್ಯಕ್ಕೆ ಹೆಚ್ಚು ಉಪಯುಕ್ತ.

Ad Widget . Ad Widget .

ಹಸಿರು ಕಾಯಿ ಒಗರಾಗಿರುತ್ತದೆ. ಹಣ್ಣು ಹೆಚ್ಚು ರುಚಿಯಾಗಿರುತ್ತದೆ. ಅಧಿಕ ಪ್ರಮಾಣದ ಶರ್ಕರ ಪಿಷ್ಟಗಳ ಜೊತೆಗೆ ಪ್ರೋಟೀನು, ಸುಣ್ಣ, ರಂಜಕ, ಕಬ್ಬಿಣ ಹಾಗೂ ಕ್ಯಾಲೊರಿ ಸತ್ವಗಳಿರುತ್ತವೆ. ‘ಸಿ’ ಅನ್ನಾಂಗದ ಜೊತೆಗೆ ಇತರ ಅನ್ನಾಂಗಗಳು ಸ್ವಲ್ಪ ಮಟ್ಟಿಗೆ ಇರುತ್ತದೆ. ದೋರೆಗಾಯಿಯಾಗಿದ್ದಾಗ (ಅರ್ಧಹಣ್ಣು) ಅಧಿಕ ಪೆಕ್ಟಿನ್ ಅಂಶವಿರುತ್ತದೆ.

ಸೀಬೆಹಣ್ಣನ್ನು ರುಚಿಗೋಸ್ಕರ ಇಲ್ಲವೇ ಆಹಾರವಾಗಿ ಬಳಸುವುದು ಮಾತ್ರವಲ್ಲ, ಅದು ಉತ್ತಮ ಔಷಧಿಯ ಗುಣ ಸಹ ಹೊಂದಿದೆ. ಅಧಿಕ ಪ್ರಮಾಣದ ಪ್ರೋಟೀನು ಇರುವ ಕಾರಣ ಮಾಂಸಖಂಡಗಳನ್ನು ಬಲಪಡಿಸಬಲ್ಲದು. ನಾರಿನ ಅಂಶ ಅಧಿಕವಿರುವ ಕಾರಣ ತಿಂದ ಆಹಾರ ಕರುಳುಗಳಲ್ಲಿ ಸುಲಭವಾಗಿ ಚಲಿಸುವಂತೆ ಮಾಡಬಲ್ಲದು. ಆದ್ದರಿಂದ ಮಲಬದ್ಧತೆಗೆ ಇದು ದಿವ್ಯೌಷಧ. ಈ ಉದ್ದೇಶಕ್ಕಾಗಿ ರಾತ್ರಿ ಊಟದ ನಂತರ ಪ್ರತಿ ನಿತ್ಯ ಒಂದೆರೆಡು ಹಣ್ಣುಗಳನ್ನು ತಿಂದಲ್ಲಿ ಮುಂಜಾನೆ ಸುಖ ವಿರೇಚನ ಸಾಧ್ಯ.

ಹಣ್ಣುಗಳಲ್ಲಿರುವ ಕಬ್ಬಿಣದ ಅಂಶ ರಕ್ತ ಶುದ್ಧಿಗೆ ಸಹಾಯಕ. ಇದು ‘ಸಿ’ ಅನ್ನಾಂಗದ ಒಳ್ಳೆಯ ಮೂಲವಾದ್ದರಿಂದ ಹಲ್ಲಿನ ಒಸಡುಗಳು ಗಟ್ಟಿಗೊಳ್ಳುತ್ತವೆ. ಹಾಗೂ ಸ್ಕರ್ವಿ ರೋಗವನ್ನು ದೂರ ಮಾಡಬಲ್ಲದು.

ಸೀಬೆಯಲ್ಲಿ ಬೆಟಾ ಕೆರಾಟಿನ್, ಪೊಟ್ಯಾಶಿಯಂ ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ಇದು ಹೆಚ್ಚು ಉಪಯೋಗಕಾರಿಯಾಗಿದ್ದು ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣವನ್ನು ಹೊಂದಿದೆ ಹಾಗೂ ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಹಣ್ಣು ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊಹೈಡ್ರೇಟ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನು ನಿಯಂತ್ರಿಸುತ್ತದೆ. ಸೀಬೆಯಲ್ಲಿ ಕೊಬ್ಬಿನಾಂಶ ಕೇವಲ 0.9 ಇದ್ದು, 84 ಕ್ಯಾಲೊರಿ ಮಾತ್ರ ಇರುತ್ತದೆ. ಸೇಬು ಹಣ್ಣಿಗೆ ಹೋಲಿಸಿದರೆ ಸೀಬೆಯಲ್ಲಿ ಶೇ 42 ರಷ್ಟು ಕಡಿಮೆ ಕ್ಯಾಲೊರಿ ಮತ್ತು ಶೇ 38 ರಷ್ಟು ಕಡಿಮೆ ಕೊಬ್ಬಿನಾಂಶವಿದೆ.

ಮಕ್ಕಳಿಗೆ ಕೆಲವರು ಈ ಹಣ್ಣನ್ನು ತಿನ್ನಲು ಕೊಡುವುದಿಲ್ಲ ಅದಕ್ಕೆ ಕಾರಣ ಅವು ಕೆಮ್ಮನ್ನು ಉಂಟು ಮಾಡುತ್ತವೆ ಎಂಬ ಶಂಕೆ. ಆದರೆ ಇದು ತಪ್ಪು. ಎಳೆಯ ಮಕ್ಕಳಿಗೆ ಸಾಕಷ್ಟು ಹಣ್ಣನ್ನು ಕೊಡುತ್ತಿದ್ದಲ್ಲಿ ‘ಸಿ’ ಅನ್ನಾಂಗದ ಅಭಾವ ತಾನೇ ತಾನಾಗಿ ನಿವಾರಣೆಯಾಗುತ್ತದೆ.

ನುಣ್ಣಗೆ ಕುಟ್ಟಿ ಪುಡಿಮಾಡಿದ ಎಲೆಗಳನ್ನು ಸಂಧಿವಾತದಲ್ಲಿ ಬಳಸುತ್ತಾರೆ. ಅವುಗಳ ತಿಳಿರಸ ಅಪಸ್ಮಾರಕ್ಕೆ ಒಳ್ಳೆಯ ಔಷಧಿ. ಎಲೆಗಳನ್ನು ಕುದಿಸಿ ತೆಗೆದ ನೀರನ್ನು ಮುಕ್ಕಳಿಸುತ್ತಿದ್ದಲ್ಲಿ ಒಸಡುಗಳ ಊತ ಮತ್ತು ಹಲ್ಲು ನೋವು ತಗ್ಗುತ್ತದೆ. ಸೀಬೆ ಮರದ ಎಲೆಗಳನ್ನು ಅರೆದು ಗಾಯ ಹಾಗೂ ವ್ರಣಗಳಿಗೆ ಪಟ್ಟು ಹಾಕುವುದುಂಟು. ಹಾಗಿರುವಾಗ ಸುಲಭದಲ್ಲಿ ಸಿಗುವ ಸೀಬೆ ಹಣ್ಣನ್ನು ಬಿಡಬೇಡಿ…

Leave a Comment

Your email address will not be published. Required fields are marked *