ಸಮಗ್ರ ನ್ಯೂಸ್: ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದೆ.
ಇಲ್ಲಿನ ಗುಂಡ್ಯ ಹೊಳೆ ಬದಿಗೆ ತೆರಳಿದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ್ದು ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ( 45) ಮತ್ತು ಅವರ ಪುತ್ರ ಶರಣ್ (18) ಶನಿವಾರದಂದು ಗುಂಡ್ಯ ಹೊಳೆ ಬದಿಗೆ ತೆರಳಿದ್ದರು.

ಈ ವೇಳೆ ಕಾಡಿನಿಂದ ಹೊಳೆಯತ್ತ ಆಗಮಿಸಿದ್ದ ಒಂಟಿ ಸಲಗವೊಂದು ಶರಣ್ ಮೇಲೆ ದಾಳಿ ಮಾಡಿದ್ದು, ಈ ವೇಳೆ ರಕ್ಷಣೆಗೆ ಮುಂದಾದ ತಿಮ್ಮಪ್ಪ ಅವರನ್ನೂ ಕೆಡವಿ ಕಾಲಿನಿಂದ ಒದ್ದು ಗಂಭೀರವಾಗಿ ಗಾಯಗೊಳಿಸಿದೆ.
ಗಾಯಗೊಂಡ ತಿಮ್ಮಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಶರಣ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.