ಸಮಗ್ರ ನ್ಯೂಸ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಭಾರೀ ಕಾಲ್ತುಳಿತದ ದುರ್ಘಟನೆಯೊಂದು ವರದಿಯಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರೋಡ್‌ಶೋನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ.
ರಾಜ್ಯದ ನೆಲ್ಲೂರು ಜಿಲ್ಲೆಯಲ್ಲಿ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ಜನರ ನಡುವೆ ನೂಕುನುಗ್ಗಲು ಸೃಷ್ಟಿಯಾಗಿತ್ತು. ಚಂದ್ರಬಾಬು ನಾಯ್ಡು ಅವರ ಬೆಂಗಾವಲು ಪಡೆ ಈ ಪ್ರದೇಶವನ್ನು ಹಾದುಹೋಗುತ್ತಿದ್ದಂತೆ ನೂಕುನುಗ್ಗಲು ವಿಪರೀತವಾಯಿತು.
ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಲ್ಲಿ ನೂಕು ನುಗ್ಗಲಿನಿಂದಾಗಿ ಕೆಲವರು ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಜನರ ಕಾಲ್ತುಳಿತಕ್ಕೆ ಒಬ್ಬ ಮಹಿಳೆ ಸೇರಿದಂತೆ ಎಂಟು ಮಂದಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆಯು ಬಿಡುಗಡೆಯಾದ ನಂತರವೇ ಸಾವಿನ ಸಂಖ್ಯೆಯ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ.
ಬುಧವಾರ ಸಭೆಯನ್ನು ತಕ್ಷಣವೇ ರದ್ದುಪಡಿಸಿದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಈ ಕಾಲ್ತುಳಿತದಲ್ಲಿ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಪಕ್ಷದ ಮುಖಂಡರನ್ನು ಕೋರಿದ್ದಾರೆ.