ಸಮಗ್ರ ನ್ಯೂಸ್: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಮಂಗಳವಾರ ಅದ್ದೂರಿಯ ತೆರೆ ಬಿದ್ದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಡಿ.21ರಂದು ಜಾಂಬೂರಿಗೆ ಚಾಲನೆ ನೀಡಿದ್ದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವಿವಾರ ಆಗಮಿಸಿ ಜಾಂಬೂರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದೇಶ ವಿದೇಶದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರ ಸಹಿತ ಲಕ್ಷಾಂತರ ಮಂದಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಜಾಂಬೂರಿಗೆ ಸಾಕ್ಷಿಯಾಗಿದ್ದರು.
ಮಂಗಳವಾರ ಮುಂಜಾನೆ ಸಾವಿರಾರು ವಿದ್ಯಾರ್ಥಿಗಳು ಯೋಗ ಪ್ರದರ್ಶನ ನಡೆಸಿದರು. ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಸಾನ ಮಾಡುವ ದೃಶ್ಯಗಳು ಕಣ್ಮನ ಸೆಳೆದವ. ಬಳಿಕ ಸರ್ವಧರ್ಮ ಪ್ರಾರ್ಥನೆ, ರಾಷ್ಟ್ರಧ್ವಜ ಸಹಿತ ವಿವಿಧ ಧ್ವಜಗಳ ಅವರೋಹಣ, ಧ್ವಜ ಹಸ್ತಾಂತರ ಪ್ರಕ್ರಿಯೆ ನಡೆಯಿತು.
ಕೊನೆಯ ದಿನವಾದ ಮಂಗಳವಾರ(ಡಿ.27) ಯೋಗ ಪ್ರದರ್ಶನದ ಬಳಿಕ ಜೈನ, ಮುಸ್ಲಿಂ, ಕ್ರೈಸ್ತ ಗುರುಗಳು ಸಂದೇಶ ನೀಡಿದರು. ಮಿಲಾಗ್ರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಫಾ. ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಸಮಸ್ತ ಸುನ್ನಿ ಯುವಜನ ಸಂಘದ ದ.ಕ ಜಿಲ್ಲಾ ನಾಯಕ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮೂಡುಬಿದಿರೆ ಜೈನಮಠದ ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಸರ್ವ ಧರ್ಮ ಪ್ರಾರ್ಥನೆ ನಡೆಸಿದರು.
ಜಾಂಬೂರಿಯ ಉದ್ಘಾಟನೆ ವೇಳೆ ಆರೋಹಣ ಮಾಡಲಾಗಿದ್ದ ಧ್ವಜಗಳನ್ನು ಅವರೋಹಣ ಮಾಡಲಾಯಿತು. ರಾಷ್ಟ್ರಧ್ವಜ, ವಿಶ್ವ ಸ್ಕೌಟ್ಸ್ ಧ್ವಜ, ವಿಶ್ವ ಗೈಡ್ಸ್ ಧ್ವಜ, ವಿಶ್ವ ಗೈಡ್ಸ್ ಧ್ವಜ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ಹಾಗೂ ಜಾಂಬೂರಿ ಧ್ವಜವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಹಿರಿಯ ವಿದ್ಯಾರ್ಥಿಗಳು ಅವರೋಹಣ ಮಾಡಿದರು. ಬಳಿಕ ಈ ಧ್ವಜಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಹಸ್ತಾಂತರಿಸಿದರು. ಬಳಿಕ ಅವರು ಜಾಂಬೂರಿ ಮುಕ್ತಾಯವನ್ನು ಘೋಷಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಡಾ. ಎಂ.ಮೋಹನ್ ಆಳ್ವ ಸ್ಕೌಟ್ಸ್ ಮತ್ತು ಗೈಡ್ಸ್‌ನ ನಾಯಕರನ್ನು ಗೌರವಿಸಿದರು. ಪ್ರತಿ ರಾಜ್ಯ, ಜಿಲ್ಲೆಯ ಪ್ರಮುಖರಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ವಿದ್ಯಾರ್ಥಿ ತಂಡಗಳ ಮುಖ್ಯಸ್ಥರಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ವಿತರಿಸಲಾಯಿತು. ಭಾಗವಹಿಸಿದ ಪ್ರತಿ ವಿದ್ಯಾರ್ಥಿಗೂ ಜಾಂಬೂರಿಯ ನೆನಪಿಗಾಗಿ ಜಾಂಬೂರಿ ಪದಕ ನೀಡಲಾಯಿತು. ವಿವಿಧ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳೂ ತಮ್ಮಲ್ಲಿರುವ ವಸ್ತುಗಳನ್ನು ಪರಸ್ಪರ ಹಂಚಿಕೊಂಡು ಸ್ನೇಹ ಬಾಂಧ್ಯವನ್ನು ಉಳಿಸಿಕೊಂಡರು.
ಜಾಂಬೂರಿಯ ತೆರೆಯೊಂದಿಗೆ 48 ಸಾವಿರ ಮಂದಿ ವಿದ್ಯಾರ್ಥಿಗಳು, 4 ಸಾವಿರಕ್ಕೂ ಅಧಿಕ ಅಧಿಕಾರಿಗಳು, ಶಿಕ್ಷಕರು ಆಳ್ವಾಸ್ ಕಾಲೇಜು ಕ್ಯಾಂಪಸ್‌ನಿಂದ 700ಕ್ಕೂ ಅಧಿಕ ಸರಕಾರಿ ಮತ್ತು 100ಕ್ಕೂ ಅಧಿಕ ಖಾಸಗಿ ಬಸ್‌ಗಳಲ್ಲಿ ನಿರ್ಗಮಿಸಿದರು