Ad Widget .

ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ಕೊಡದೆ ನಿದ್ದೆ ಮಾಡ್ತಿದೀರಾ? ಸಚಿವ ಎಸ್.ಅಂಗಾರಗೆ ಸಿದ್ದರಾಮಯ್ಯ ಫುಲ್ ಕ್ಲಾಸ್

ಸಮಗ್ರ ನ್ಯೂಸ್: ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದು, ಪರವಾನಗಿ ಇರುವವರಿಗೆ ತಕ್ಷಣವೇ ಸೀಮೆ ಎಣ್ಣೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು.

Ad Widget . Ad Widget .

ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಅವರ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು, ಕೇಂದ್ರ ಸರ್ಕಾರ ನಮಗೆ ಸಬ್ಸಿಡಿ ರೂಪದಲ್ಲಿ ಸೀಮೆ ಎಣ್ಣೆ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Ad Widget . Ad Widget .

ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕಳೆದ 10 ತಿಂಗಳಿನಿಂದ ನಾಡದೋಣಿ ಮೀನುಗಾರಿಕೆ ಮಾಡುವವರಿಗೆ ಸರ್ಕಾರ ಸೀಮೆ ಎಣ್ಣೆ ನೀಡಿಲ್ಲ. ಸರ್ಕಾರ ನಿದ್ದೆ ಮಾಡುತ್ತಿದೆಯೇ? ಮೀನುಗಾರರು ಏನು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಆಗಲಿಲ್ಲ ಎಂದರೆ ಮನೆಗೆ ಹೋಗಿ ಎಂದು ಗರಂ ಆದರು. ಕರಾವಳಿ ಪ್ರದೇಶದಲ್ಲಿ ಜನರು ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಅವರಿಗೆ 10 ತಿಂಗಳಿನಿಂದ ಸೀಮೆ ಎಣ್ಣೆ ನೀಡಿಲ್ಲ ಎಂದರೆ ಹೇಗೆ? ಕೇಂದ್ರ ಸಚಿವರ ಜೊತೆಗೆ ನೀವು ಮಾತುಕತೆ ಆದರೂ ನಡೆಸಿ, ಇನ್ನೇನಾದರೂ ಮಾಡಿ ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ಪ್ರತಿ ತಿಂಗಳು 300 ಲೀಟರ್ ಸೀಮೆ ಎಣ್ಣೆ ನೀಡಬೇಕು ಎಂಬ ನಿಯಮವಿದೆ. ಆದರೆ, ಹತ್ತು ತಿಂಗಳಿಂದ ಸೀಮೆ ಎಣ್ಣೆ ಪೂರೈಸಿಲ್ಲ. ಕೇಂದ್ರ ಸರ್ಕಾರದಿಂದ 5,472 ಲೀಟರ್ ಸೀಮೆ ಎಣ್ಣೆ ಬಿಡುಗಡೆಯಾಗಿದೆ. ಉಳಿದ 18,618 ಲೀಟರ್ ಸೀಮೆ ಎಣ್ಣೆ ಬಂದಿಲ್ಲ ಎಂದರೆ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. 4,514 ನಾಡದೋಣಿಗಳಿಗೆ ಕೇವಲ 2,472 ಲೀಟರ್ ಬಿಡುಗಡೆ ಮಾಡಲಾಗಿದೆ. ಪ್ರತಿ ತಿಂಗಳು 300 ಲೀಟರ್ ಸೀಮೆ ಎಣ್ಣೆ ಕೊಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಉಪ ನಾಯಕ ಯು.ಟಿ.ಖಾದರ್, ಕೇಂದ್ರ ಸರ್ಕಾರ ಸೀಮೆ ಎಣ್ಣೆಗೆ ಸಬ್ಸಿಡಿ ಕೊಡುತ್ತಿಲ್ಲ. ಕೊಡುವುದೂ ಇಲ್ಲ. ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಬಾರದು. ಇದಕ್ಕೆ ಹೆಚ್ಚು ಎಂದರೆ 50 ಕೋಟಿ ರೂ. ಅನುದಾನ ಬೇಕು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು. ಆಗ ಸಚಿವ ಅಂಗಾರ ಅವರು, ಈಗಾಗಲೇ ಇಲಾಖೆ ವತಿಯಿಂದಲೇ ಸೀಮೆ ಎಣ್ಣೆಯನ್ನು ವಿತರಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜೊತೆಗೆ ರಾಜ್ಯಕ್ಕೆ ಬೇಕಾಗಿರುವ ಸೀಮೆ ಎಣ್ಣೆಯನ್ನು ವಿತರಿಸಲು ಕೇಂದ್ರಕ್ಕೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಂಗಾರ, ಮೀನುಗಾರರಿಗೆ ಮನೆ ಕಟ್ಟಲು 1.20 ಲಕ್ಷ ರೂ. ಹಣವನ್ನು ನೀಡುತ್ತಿದ್ದೇವೆ. ಇದನ್ನು ಹೆಚ್ಚಳ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

Leave a Comment

Your email address will not be published. Required fields are marked *