ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದ ಘಟನೆ ನಡೆದು 24 ಗಂಟೆಯೂ ಆಗಿಲ್ಲ. ಮತ್ತೊಂದು ಆನೆ ದಾಳಿ ಪ್ರಕರಣ ದಾಖಲಾಗಿದೆ. ತರೀಕೆರೆ ತಾಲೂಕಿನ ರಾಗಿಬಸವನಹಳ್ಳಿಯಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ 65 ವರ್ಷದ ಈರಣ್ಣ ಎಂಬುವರ ಮೇಲೆ ದಾಳಿ ಮಾಡಿದ ಕಾಡಾನೆ ಅವರನ್ನ ಕೊಂದಿತ್ತು. ಇಂದು ಬೆಳಗ್ಗೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೂ ಕಾಡಾನೆ ದಾಳಿ ಮಾಡಿದೆ. ಆದರೆ, ಅದೃಷ್ಟವಶಾತ್ ಮೂವರು ಸಾವಿನಿಂದ ಪಾರಾಗಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಕೂಲಿ ಕೆಲಸಕ್ಕೆಂದು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬಂದಿದ್ದರು. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಟೆಂಟ್ ಹಾಕಿಕೊಂಡು ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ದಂಪತಿ ಹಾಗೂ ಮತ್ತೊಬ್ಬರು ಮೂವರು ಸಾವಿನಿಂದ ಪಾರಾಗಿದ್ದಾರೆ. ನಾಗವಲ್ಲಿ ಹಾಗೂ ಗಂಡುಗುಸೆ ದಂಪತಿಗೆ ತೀವ್ರ ಗಾಯವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗವಲ್ಲಿಗೆ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಆನೆ ಬಂದಿದೆ ಅಂದರೆ ಆಲ್‍ಮೋಸ್ಟ್ ಕಾಡಂಚಿನ ಗ್ರಾಮಗಳಲ್ಲಿದ್ದ ಆನೆ ಹಾವಳಿ ಈಗ ನಗರ ಪ್ರದೇಶಕ್ಕೂ ಕಾಲಿಟ್ಟಿದೆ. ಬಣಕಲ್ ಸುಮಾರು 400ಕ್ಕೂ ಹೆಚ್ಚು ಮನೆಗಳಿರುವ ಹೋಬಳಿ ಕೇಂದ್ರ. ಅಲ್ಲಿಗೆ ಆನೆ ಬಂದಿದೆ ಅಂದರೆ ಜನ ತೀವ್ರ ಕಂಗಾಲಾಗಿದ್ದಾರೆ. ಈಗಾಗಲೇ ಕಳೆದ ಆರು ತಿಂಗಳಲ್ಲಿ ಮೂಡಿಗೆರೆಯಲ್ಲಿ ಮೂವರು ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಜನ ಕಾಡಾನೆ ದಾಳಿಯಿಂದ ಕಂಗೆಟ್ಟು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಅರಣ್ಯ ಇಲಾಖೆ ಕಚೇರಿಯ ಗೇಟ್ ಮುರಿದಿದ್ದರು. ಕಳ್ಳ ಭೇಟೆ ನಿಗ್ರಹ ದಳದ ಕ್ಯಾಂಪನ್ನು ದ್ವಂಸ ಮಾಡಿದ್ದರು. ಬಳಿಕ ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನು ಸೆರೆ ಹಿಡಿದಿದ್ದರು. ಆದರೆ, ನರಹಂತಕ ಒಂಟಿ ಸಲಗ ಮೂಡಿಗೆರೆ ಭೈರನನ್ನ ಸೆರೆ ಹಿಡಿದಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದರು. ಇಂದು ಬೆಳಗ್ಗೆ ಬಣಕಲ್ ಗ್ರಾಮಕ್ಕೆ ಬಂದಿರುವ ಒಂಟಿ ಸಲಗ ಕೂಡ ಅದೇ ಭೈರ ಎಂಬ ಮಾತುಗಳು ಕೇಳಿ ಬಂದಿದೆ. ಮಲೆನಾಡಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿ ಮೀತಿ ಮೀರಿದ್ದು ಜನ ನೆಮ್ಮದಿಯಿಂದ ಬದುಕೋದಕ್ಕೆ ಅಸಾಧ್ಯವಾದಂತಹಾ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.