Ad Widget .

ಸುರತ್ಕಲ್ ಕೊಲೆ ಪ್ರಕರಣ| ನಿನ್ನೆ ಸಂಜೆ ಆಗಿದ್ದೇನು? ಪೊಲೀಸ್ ಕಮಿಷನರ್ ಏನ್ ಹೇಳಿದ್ರು? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ಕಾಟಿಪಳ್ಳ ಎಂಬಲ್ಲಿ ಜಲೀಲ್​ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಪ್ರಕರಣವನ್ನು ಕೋಮು ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget . Ad Widget .

ಕೊಲೆಯಾದ ಜಲೀಲ್​ ಅವರು ಕಾಟಿಪಳ್ಳದ ನೈತಂಗಡಿ ಎಂಬಲ್ಲಿ ಪ್ರಾವಿಷನ್​ ಸ್ಟೋರ್ ನಡೆಸುತ್ತಿದ್ದರು. ರಾತ್ರಿ ವೇಳೆ ಅವರ ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.

Ad Widget . Ad Widget .

ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್​ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮುಸ್ಲಿಮ್​ ಸಮುದಾಯದ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಕೋಮು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವ ಕಾರಣ ಜಿಲ್ಲಾ ಪೊಲೀಸರು ಸಕಲ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಾರೆ.

ಈ ನಡುವೆ ಜಲೀಲ್ ದಾಖಲಾಗಿದ್ದ ಆಸ್ಪತ್ರೆಗೆ ಪೊಲೀಸ್ ಕಮಿಷನರ್‌ ಶಶಿಕುಮಾರ್‌ ಭೇಟಿ ನೀಡಿದಾಗ ಮೃತರ ಸಂಬಂಧಿಕರು ಅವರಿಗೆ ಮುತ್ತಿಗೆ ಹಾಕಿದರು. ಗೂಂಡಾಗಿರಿಯನ್ನು ನಿಯಂತ್ರಣ ಮಾಡದೇ ಈಗ ಯಾಕೆ ಇಲ್ಲಿಗೆ ಬಂದಿದ್ದೀರಿ? ಎಂದು ಪ್ರಶ್ನಿಸಿದರು.

ಚೂರಿ ಇರಿತದ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡ ಇದೆ ಎಂದು ಸಂಬಂಧಿಕರು ಆರೋಪಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಕಮಿಷನರ್‌ ಪ್ರತಿಕ್ರಿಯಿಸಿ, ಕೃತ್ಯ ಯಾರು ನಡೆಸಿದ್ದಾರೆ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ನಂತರ ಜಲೀಲ್ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಆಗಮಿಸಿದ ಶಾಸಕ ಯು.ಟಿ.ಖಾದರ್‌ಗೂ ಮೃತರ ಸಂಬಂಧಿಕರು ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ಇಬ್ಬರು ದುಷ್ಕರ್ಮಿಗಳು ಅಂಗಡಿಗೇ ನುಗ್ಗಿ ಕೊಲೆ ಮಾಡಿರುವುದರಿಂದ ಪ್ರಕರಣದ ಸೂಕ್ಷ್ಮತೆಯ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಮುಖವಾಗಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ತನಿಖೆಯನ್ನು ಕೇಂದ್ರೀಕರಿಸಿದ್ದಾರೆ. ಜಲೀಲ್​ ಅವರಿಗೆ ಈ ಹಿಂದೆ ಬೆದರಿಕೆಗಳು ಏನಾದರೂ ಇದ್ದವೇ ಎಂಬ ನಿಟ್ಟಿನಲ್ಲಿ ವಿಚಾರಣೆ ಶುರು ಮಾಡಿದ್ದಾರೆ. ಸುತ್ತಲಿನ ಪ್ರದೇಶದಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಚಲವಲನ ಪತ್ತೆಗೆ ಮುಂದಾಗಿದ್ದಾರೆ. ಕೊಲೆ ಆರೋಪಿಗಳು ನಗರ ಬಿಟ್ಟು ಹೊರಕ್ಕೆ ತೆರಳದಂತೆ ನೋಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಹತ್ಯೆಯಾದ ಅಬ್ದುಲ್ ಜಲೀಲ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ. ಅಬ್ದುಲ್ ಜಲೀಲ್ ಅವರಿಗೆ ಇಬ್ಬರು ಚೂರಿ ಇರಿದು ಪರಾರಿಯಾಗಿದ್ದಾರೆ. ಅವರ ಹತ್ಯೆ ಹಿಂದಿನ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯರು ಕೆಲವು ಅನುಮಾನ ವ್ಯಕ್ತಪಡಿಸಿದ್ದು, ಪರಿಶೀಲಿಸುತ್ತೇವೆ ಘಟನೆ ನಡೆದಿರುವ ಸ್ಥಳ ಹಿಂದಿನಿಂದಲೂ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕ್ರಿಸ್ಮಸ್ ಇರುವ ಕಾರಣ ಅಗತ್ಯವಾದರೆ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *