ಸಮಗ್ರ ನ್ಯೂಸ್: ಚೀನಾದಲ್ಲಿ ವೇಗವಾಗಿ ಹರಡುವ ಮೂಲಕ ಮತ್ತೆ ಮರಣ ಮೃದಂಗ ಬಾರಿಸುತ್ತಿರುವ ಒಮಿಕ್ರಾನ್ ಬಿಎಫ್-7 ರೂಪಾಂತರಿ, ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಇದು ಅಪಾಯಕಾರಿ ತಳಿ ಎಂದೂ ಹೇಳಲಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಮಾಸ್ಕ್ ಕಡ್ಡಾಯ ಸೇರಿದಂತೆ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಾಸ್ಕ್ ಮತ್ತು ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಡಂವೀಯ ಹೇಳಿದ್ದಾರೆ. ಅಲ್ಲದೇ ಈವರೆಗೆ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರು ತಕ್ಷಣ ಲಸಿಕೆಯನ್ನು ಪಡೆದುಕೊಳ್ಳಲು ಆಗ್ರಹಿಸಿದ್ದಾರೆ.
ಕೋವಿಡ್ ಭೀತಿ ಆವರಿಸಿರುವ ಸಂದರ್ಭದಲ್ಲಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ರೋಗನಿರೋಧಕ ಕೋವಿಡ್-19 ಕಾರ್ಯಕಾರಿ ಗುಂಪಿನ ಮುಖ್ಯಸ್ಥ ಡಾ. ಎನ್.ಕೆ ಅರೋರಾ ಅವರು ಹೊಸ ಕರೊನಾ ರೂಪಾಂತರಿ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡಬೇಕಿಲ್ಲ ಎಂದು ಧನಾತ್ಮಕ ಮಾತುಗಳನ್ನಾಡಿದ್ದು ಇದರಿಂದ ಕೊಂಚ ರಿಲೀಫ್ ಸಿಕ್ಕಿದೆ.
ಹೊಸ ಕೊರೊನಾ ಅಲೆಯ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ಪ್ರತಿನಿಧಿ ಡಾ. ಅನಿಲ್ ಗೋಯೆಲ್ ಪ್ರತಿಕ್ರಿಯೆ ನೀಡಿದ್ದು , ದೇಶದ ಶೇ. 95 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಲಾಕ್ಡೌನ್ನ ಅವಶ್ಯಕತೆ ಇಲ್ಲ ಎಂದಿದ್ದಾರೆ. ಚೀನಾ ಮಂದಿಗಿಂತ ಭಾರತೀಯರಲ್ಲಿ ಪ್ರತಿರೋಧಕ ವ್ಯವಸ್ಥೆ ಉತ್ತಮವಾಗಿದೆ. ಹೀಗಾಗಿ ಕೊರೊನಾ ಭಾರತೀಯರನ್ನು ಹೆಚ್ಚು ಬಾಧಿಸುವುದಿಲ್ಲ ಎಂಬ ಭರವಸೆ ತುಂಬಿದ್ದಾರೆ.
ಭಾರತೀಯರು ಹೈಬ್ರಿಡ್ ನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಮತ್ತು ನೈಸರ್ಗಿಕ ಕೋವಿಡ್ ವೈರಸ್ ದೇಶದ ಶೇ. 90 ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿನ ಜನರು ಹೈಬ್ರಿಡ್ ಇಮ್ಯುನಿಟಿ ಲಸಿಕೆಯನ್ನು ಪಡೆದಿದ್ದಾರೆ. INSACOG ಡೇಟಾ ಪ್ರಕಾರ, ಪ್ರಪಂಚದ ಇತರ ಭಾಗಗಳಲ್ಲಿ ಕಂಡುಬರುವ ಒಮಿಕ್ರಾನ್ನ ಉಪ-ವರ್ಗಗಳ ಎಲ್ಲಾ ರೂಪಾಂತರಗಳು ಭಾರತದಲ್ಲಿವೆ. ಹೀಗಾಗಿ ಹೆದರುವ ಅವಶ್ಯಕತೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕಂತೂ ಭಾರತೀಯರು ಲಾಕ್ ಡೌನ್ ಗೆ ಹೆದರಬೇಕಾಗಿಲ್ಲ. ಆದರೆ ಈ ಅಲೆಯನ್ನು ತಾತ್ಸಾರ ಮಾಡಿದರೆ ಮತ್ತೆ ಲಾಕ್ ಡೌನ್ ಬಾಧಿಸುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕ ಕೊರೊನಾ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.