ಸಮಗ್ರ ನ್ಯೂಸ್: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಆತಂಕ ಮಾಡುವುದು ಬೇಡ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಎಎಲ್ಐ, ಸಾರಿ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡುವ ನಿರ್ಧಾರ ಮಾಡಲಾಗಿದೆ. ವಿಶೇಷ ಎಂದರೇ, ಒಳಾಂಗಣದಲ್ಲಿ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲು ಸಲಹೆ ನೀಡಿದ್ದೇವೆ. ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಎಷ್ಟು ಪ್ರಮಾಣದಲ್ಲಿ ಕೊರೊನಾ ಟೆಸ್ಟ್ ಮಾಡ್ಬೇಕು ಅಂತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಅಕ್ಸಿಜನ್ ಪ್ಲಾಂಟ್ಗಳನ್ನು ಸರಿಯಾದ ರೀತಿಯಲ್ಲಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಸಿಜನ್ ಬಗ್ಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಬೆಡ್ಗಳನ್ನು ಕೊರೊನಾಗೆ ಮೀಸಲು ಮಾಡಲು ಸೂಚನೆ ನೀಡಲಾಗಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ಹಂಚಿಕೊಂಡು ಕ್ರಮವಹಿಸಲು ಸೂಚನೆ ನೀಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ವ್ಯಾಕ್ಸಿನೇಶನ್ ಮತ್ತು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಜನರಿಗೆ ಸಚಿವ ಸುಧಾಕರ್ ಮನವಿ ಮಾಡಿದರು.