ಸಮಗ್ರ ನ್ಯೂಸ್: ಎಲೆ ಚುಕ್ಕಿ ರೋಗದಿಂದ ಹಾಳಾದ ಅಡಿಕೆ ಬೆಳೆಗೆ ಪರಿಹಾರ ವಿತರಿಸಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಆಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆ ಎಲೆಚುಕ್ಕಿ ರೋಗದಿಂದ ನೆಲಕಚ್ಚಿದ್ದು, ಪರ್ಯಾಯ ಬೆಳೆ ಬೆಳೆಯಲು ಜನ ಚಿಂತನೆ ನಡೆಸಿದ್ದಾರೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುವತ್ತ ಗಮನಹರಿಸಬೇಕು’ ಎಂದರು.
ಈ ವೇಳೆ ತೋಟಗಾರಿಕೆ ಸಚಿವರ ಪರವಾಗಿ ಗೃಹಸಚಿವರು ಉತ್ತರ ನೀಡಿ, ಹಲವು ಅಡಿಕೆ ತೋಟಗಳು ಎಲೆ ಚುಕ್ಕಿ ರೋಗದಿಂದ ಸಂಪೂರ್ಣ ಹಾಳಾಗಿದ್ದು, ಮುಖ್ಯಮಂತ್ರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಶಾಶ್ವತ ಪರಿಹಾರಕ್ಕಾಗಿ ಸಂಶೋಧನೆ ಕೈಗೊಳ್ಳಲು ಕೃಷಿ ವಿಜ್ಞಾನಿಗಳಿಗೆ ನಿರ್ದೇಶನ ನೀಡಲಾಗಿದ್ದು ಇದಕ್ಕಾಗಿ 4.39 ಕೋಟಿ ರೂ ನೀಡಲಾಗಿದೆ ಎಂದರು.
ಅಡಿಕೆ ಬೆಳೆ ವಿಸ್ತರಣೆ ಬಹುದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಮಾರುಕಟ್ಟೆ ಅವಕಾಶ ಸೀಮಿತವಾಗಿದೆ. ಅಡಿಕೆ ಬೆಳೆ ವಿಸ್ತರಣೆ ಬೇಡ, ಹಳೆ ತೋಟಗಳ ರಕ್ಷಣೆ ಆದ್ಯತೆಯಾಗಲಿ ಎಂದು ಅಭಿಪ್ರಾಯಪಟ್ಟರು.