ಸಮಗ್ರ ನ್ಯೂಸ್: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಿಕ ನವೀನ್ ಕಾಮಧೇನುರನ್ನು ಏಕಾಏಕಿ ಮನೆಗೆ ಬಂದು ಅಂಬ್ಯುಲೆನ್ಸ್ ನಲ್ಲಿ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ನೀರಜಾಕ್ಷಿಯವರಿಂದ ಹೈಕೋರ್ಟ್ ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನವೀನರನ್ನು ತಾಯಿಯ ವಶಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ನವೀನ್ ಕುರಿತಂತೆ ಹೈಕೋರ್ಟ್ ವರದಿ ಕೇಳಿದ್ದು, ನವೀನ್ ರನ್ನು ಆಸ್ಪತ್ರೆಗೆ ದಾಖಲುಗೊಳಿಸಿರುವುದಾಗಿ ಪೋಲೀಸರಿಂದ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ನವೀನರನ್ನು ದಾಖಲಿಸಲಾದ ಆಸ್ಪತ್ರೆಗೆ ನ್ಯಾಯಾಲಯವು ವಕೀಲರನ್ನು ಕಳುಹಿಸಿದೆ.
ವಕೀಲರು ನವೀನರ ಹೇಳಿಕೆ ಪಡೆದಿದ್ದು, ವಕೀಲರ ವರದಿಯಂತೆ ನವೀನರನ್ನು ತಾಯಿ ನೀರಜಾಕ್ಷಿಯವರ ವಶಕ್ಕೊಪ್ಪಿಸಲು ಹೈಕೋರ್ಟ್ ಸೂಚಿಸಿರುವುದಾಗಿ ತಿಳಿದುಬಂದಿದೆ.
ನವೀನ್ ರನ್ನು ತಾಯಿಯ ವಶಕ್ಕೆ ನ್ಯಾಯಾಲಯವು ಒಪ್ಪಿಸಲು ಆದೇಶಿಸಿದ್ದರೂ ಡಿ. ೨೭ರ ಮಂಗಳವಾರದ ವರೆಗೆ ಬೆಂಗಳೂರಿನಲ್ಲೆ ಇರುವಂತೆ ಆದೇಶ ನೀಡಿದೆ.
ಕಳೆದ ಮಂಗಳವಾರ ಮಧ್ಯಾಹ್ನ ನವೀನ್ ತನ್ನ ಬೆಳ್ಳಾರೆಯ ಮನೆಯಲ್ಲಿದ್ದಾಗ ಏಕಾಏಕಿ ನುಗ್ಗಿದ ತಂಡವೊಂದು ಅಂಬ್ಯುಲೆನ್ಸ್ ಮೂಲಕ ಕಿಡ್ನಾಪ್ ಮಾದರಿಯಲ್ಲಿ ಹೊತ್ತೊಯ್ದಿತ್ತು. ಅದಾದ ಬಳಿಕ ಸುಂಟಿಕೊಪ್ಪದಲ್ಲಿ ಅಂಬ್ಯುಲೆನ್ಸ್ ತಡೆದು ವಿಚಾರಿಸಿದಾಗ ನವೀನ್ ತನ್ನ ಅತ್ತೆ ದಿವ್ಯಪ್ರಭಾ ಹಾಗೂ ಪತ್ನಿ ಕಿಡ್ನಾಪ್ ಮಾಡಿದ್ದಾಗಿ ಆರೋಪಿಸಿದ್ದರು.
ಅದಾದ ಬಳಿಕ ಸುಂಟಿಕೊಪ್ಪದ ಪೊಲೀಸ್ ಠಾಣಾ ಆವರಣದಿಂದ ನವೀನ್ ರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿತ್ತು. ಈ ನಡುವೆ ನವೀನ್ ತಾಯಿ ನೀರಜಾಕ್ಷಿ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ನವೀನ್ ತಂದೆ ಮಾಧವ ಗೌಡ, ಅತ್ತೆ ದಿವ್ಯಪ್ರಭಾ, ಪತ್ನಿ ಸ್ಪಂದನಾ, ಬಾವ ಸ್ಪರ್ಶಿತ್, ಮಾವ ಪರಶುರಾಮ ಸೇರಿ ಆರು ಮಂದಿ ವಿರುದ್ದ ಪ್ರಕರಣ ದಾಖಲಾಗಿತ್ತು.