ಸಮಗ್ರ ನ್ಯೂಸ್: ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಗಿಡ ಅಥವಾ ಸಸ್ಯಗಳಿಂದ ಒಂದೊಂದು ತಿನಿಸುಗಳನ್ನು ತಯಾರಿಸಿ ಸವಿಯುತ್ತಿದ್ದರು. ಇದರಿಂದ ರುಚಿ ಜೊತೆಗೆ ದೇಹದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತಿತ್ತು. ಹಾಗಾಗಿ ರೋಗಗಳು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗೀಗ ರಾಸಾಯನಿಕಗಳ ಬಳಕೆಯಿಂದ ಆಹಾರವೇ ಹಾಳಾಗಿದೆ.
ನಮ್ಮ ದೇಹಕ್ಕೆ ಪ್ರೊಟೀನ್ ಅತೀ ಮುಖ್ಯ. ತರಕಾರಿ, ಬೇಳೆಕಾಳುಗಳಲ್ಲಿ ಪ್ರೊಟೀನ್, ಫೈಬರ್ ಅಂಶಗಳು ಹೆಚ್ಚಾಗಿರುತ್ತವೆ. ಅಂತಹ ಒಂದು ರುಚಿಕರವಾದ ತರಕಾರಿ ಬಾಳೆಹೂ(ಪೂಂಬೆ). ಇದರಲ್ಲಿ ಸಾಕಷ್ಟು ಪ್ರೊಟೀನ್ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ. ಇದರಿಂದ ತಯಾರಿಸಲಾದ ಪಲ್ಯವೂ ಸ್ವಾಧಿಷ್ಟವಾಗಿರುತ್ತದೆ. ಹಾಗಾದರೆ ಹೇಗೆ ಪಲ್ಯ ತಯಾರು ಮಾಡೋದು ನೋಡೊಣ ಬನ್ನಿ…
ಬೇಕಾಗುವ ಪದಾರ್ಥಗಳು: ಬಾಳೆ ಹೂವು – 1, ತೆಂಗಿನ ತುರಿ – ಕಾಲು ಕಪ್, ನಿಂಬೆ ರಸ – 1 ಟೀಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಕಡಲೆ ಬೇಳೆ – ಅರ್ಧ ಕಪ್, ಶುಂಠಿ – 1 ಇಂಚು, ಹಸಿರು ಮೆಣಸಿನ ಕಾಯಿ – 2, ಕೆಂಪು ಮೆಣಸಿನಕಾಯಿ – 1, ಅರಿಶಿನ – ಕಾಲು ಟೀಸ್ಪೂನ್,ಎಣ್ಣೆ – 2 ಟೀಸ್ಪೂನ್, ಸಾಸಿವೆ – ಮುಕ್ಕಾಲು ಟೀಸ್ಪೂನ್, ಉದ್ದಿನ ಬೇಳೆ – 1 ಟೀಸ್ಪೂನ್, ಇಂಗು- ಚಿಟಿಕೆ, ಕರಿಬೇವಿನ ಎಲೆ, ಕೆಂಪು ಮೆಣಸಿನಕಾಯಿ – 1.
ತಯಾರಿಸುವ ವಿಧಾನ:
ಮೊದಲಿಗೆ ಬಾಳೆ ಹೂವನ್ನು ತೊಳೆದು ಮೇಲಿನ 3-4 ಪದರಗಳನ್ನು ತೆಗೆದು ಬಿಸಾಕಿ. ಈಗ ಸಣ್ಣಗೆ ಕತ್ತರಿಸಿಕೊಂಡು ನೀರಿನಲ್ಲಿ ಹತ್ತು ನಿಮಿಷ ನೆನೆಸಿ ನೀರಿನಿಂದ ಹೂವನ್ನು ಬಸಿದು ಪಕ್ಕಕ್ಕಿಡಿ. ಕಡಲೆ ಬೇಳೆಯನ್ನು 2-3 ಗಂಟೆ ಮೊದಲೇ ತೊಳೆದು ನೆನೆಸಿಟ್ಟಿರಿ. ನೀರಿನಿಂದ ತೆಗೆದು ಜೊತೆಗೆ ಶುಂಠಿ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪಿನೊಂದಿಗೆ ಕಡಲೆ ಬೇಳೆಯನ್ನು ಅರ್ಧರ್ಧ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಅಗಲವಾದ ಪಾತ್ರೆಗೆ ಹಾಕಿ, ಹೆಚ್ಚಿಟ್ಟಿದ್ದ ಬಾಳೆ ಹೂವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇಡ್ಲಿ ತಯಾರಿಸುವ ಸ್ಟೀಮರ್ ಬಿಸಿ ಮಾಡಿ ಸ್ಟೀಮರ್‌ನ ಮೇಲಿನ ತಟ್ಟೆಯಲ್ಲಿ ಬಾಳೆ ಎಲೆ ಹರಡಿ, ಅದರ ಮೇಲೆ ತಯಾರಿಸಿಟ್ಟ ಮಿಶ್ರಣವನ್ನು ಹಾಕಿ 15 ನಿಮಿಷ ಬೇಯಿಸಿಕೊಳ್ಳಿ.
15 ನಿಮಿಷಗಳ ಬಳಿಕ ಮಿಶ್ರಣವನ್ನು ಆರಲು ಬಿಡಿ. ಮಿಶ್ರಣದಲ್ಲಿ ಗಂಟುಗಳಾಗಿದ್ದರೆ ಕೈಯಿಂದಲೇ ಪುಡಿ ಮಾಡಿಕೊಳ್ಳಿ. ಬಾಣಲೆಯನ್ನು ಬಿಸಿ ಮಾಡಿ, ಎಣ್ಣೆ ಹಾಕಿ, ಸಾಸಿವೆ ಉದ್ದಿನ ಬೇಳೆ, ಅರಿಶಿನ, ಇಂಗು, ಕರಿಬೇವಿನ ಎಲೆ ಹಾಗೂ ಒಡೆದ ಕೆಂಪು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
ಬೇಯಿಸಿಟ್ಟ ಬಾಳೆಹೂವಿನ ಮಿಶ್ರಣವನ್ನು ಬೆರೆಸಿ, ಕಡಿಮೆ ಉರಿಯಲ್ಲಿ 5-10 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ಉರಿ ಯನ್ನು ಆಫ್ ಮಾಡಿ, ತುರಿದ ತೆಂಗಿನಕಾಯಿ ಹಾಗೂ ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಳೆ ಹೂವಿನ ಪಲ್ಯ ಅನ್ನದೊಂದಿಗೆ ಇಲ್ಲವೇ ಚಪಾತಿಯೊಂದಿಗೆ ಸವಿಯಬಹುದು.