ಇಸ್ಲಾಮಾಬಾದ್: ತಾಲಿಬಾನ್ ಉಗ್ರರು ಭಾನುವಾರ ಪಾಕಿಸ್ತಾನದ ವಾಯುವ್ಯ ಪ್ರದೇಶದ ಖೈಬರ್ ಪಖ್ತುಂಖ್ವಾದಲ್ಲಿ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೇ ಹಲವಾರು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರರು ಪ್ರದೇಶದ ಬನ್ನು ಕಂಟೋನ್ಮೆಂಟ್ ಅನ್ನು ನುಸುಳಿ, ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಕಾಂಪೌಂಡ್‌ನ ಒಂದು ಭಾಗವನ್ನು ವಶಕ್ಕೆ ಪಡೆದು, ಭಯೋತ್ಪಾದನಾ ನಿಗ್ರಹ ಇಲಾಖೆಗೆ ಸೇರಿದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕರು ಹೊರಗಿನಿಂದ ದಾಳಿ ಮಾಡಿದ್ದಾರೋ ಅಥವಾ ಒಳಗಡೆ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಬೆಳಕಿಗೆ ಬಂದ ತಕ್ಷಣ ಪಾಕಿಸ್ತಾನದ ಸೇನಾ ಪಡೆಯನ್ನು ನಿಯೋಜನೆ ಮಾಡಲಾಗಿದ್ದು, ಭದ್ರತಾ ಪಡೆಗಳಿಂದ ಕಾಂಪೌಂಡ್ ಅನ್ನು ಸುತ್ತುವರಿಯಲಾಗಿದೆ.
ತಾಲಿಬಾನ್ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಪಾಕಿಸ್ತಾನದ 8 ಪೊಲೀಸ್ ಸಿಬ್ಬಂದಿಯನ್ನು ಸೆರೆಯಲ್ಲಿಟ್ಟಿರುವುದು ಕಂಡುಬಂದಿದೆ. ಅವರ ಬಿಡುಗಡೆಗೆ ತಮ್ಮನ್ನು ವಿಮಾನದ ಮೂಲಕ ಸುರಕ್ಷಿತವಾಗಿ ಅಫ್ಘಾನಿಸ್ತಾನಕ್ಕೆ ದಾರಿಯನ್ನು ಮಾಡಿಕೊಡಬೇಕಾಗಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.