ಸಮಗ್ರ ನ್ಯೂಸ್: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಅಲೆಮಾರಿಗಳ ರಾಜ ಎಂದು ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಆರೋಪಿಸಿರುವ ಬೆನ್ನಲ್ಲೇ ತಿರುಗೇಟು ನೀಡಿರುವ ಹಿರಿಯ ಸಂಸದ ಶ್ರೀನಿವಾಸ್ ಪ್ರಸಾದ್, ನನ್ನ ವಿರುದ್ಧ ಆರೋಪಿಸುವ ನೈತಿಕತೆ ಎಚ್.ವಿಶ್ವನಾಥ್ ಅವರಿಗೆ ಇಲ್ಲ ಎಂದಿದ್ದಾರೆ. ಹುಣಸೂರು ಬೈ ಎಲೆಕ್ಷನ್ ಅಲ್ಲಿ ಬಿಜೆಪಿ ನೀಡಿದ್ದ 15 ಕೋಟಿ ರೂಪಾಯಿ ಹಣದಲ್ಲಿ 10 ಕೋಟಿ ರೂಪಾಯಿಯನ್ನು ತಮ್ಮ ಜೇಬಿಗೆ ವಿಶ್ವನಾಥ್ ಇಳಿಸಿಕೊಂಡಿದ್ದರು ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ಮೈಸೂರಿನ ಮಾತನಾಡಿದ ಅವರು, ವಿಶ್ವನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ‘ಕೀಟಲೇ ಮಾಡುವುದು ವಿಶ್ವನಾಥನ ಗುಣವಾಗಿದೆ. ಬಿಜೆಪಿ ಬರುವಂತೆ ನಾನೇನು ವಿಶ್ವನಾಥ್‌ಗೆ ಕೇಳಿಕೊಂಡಿರಲಿಲ್ಲ. ಆತನ ನನ್ನ ಬಳಿ ಬಂದು ಜೆಡಿಎಸ್‌ನಲ್ಲಿ ಇರುವುದಕ್ಕೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದ. ಹಾಗಾದರೆ, ಯಡಿಯೂರಪ್ಪನವರ ಜೊತೆ ಮಾತನಾಡಿ ನೋಡು ಎಂಬುದಾಗಿ ಸಲಹೆ ನೀಡಿದ್ದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋದವನು ಇವನೇ’ ಎಂದು ಹರಿಹಾಯ್ದಿದ್ದಾರೆ.
‘ಹುಣಸೂರು ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಗೆಲ್ಲುವುದಕ್ಕೆ ಆಗಲಿಲ್ಲ. ಆದರೂ, ಪಕ್ಷವು ಆತನಿಗೆ ಎಂಎಲ್‌ಸಿ ಸ್ಥಾನ ನೀಡಿ ಗೌರವಿಸಿದೆ. ಪಕ್ಷದ ಬಗ್ಗೆಯೇ ಈಗ ಕೆಟ್ಟದ್ದಾಗಿ ಮಾತನಾಡುತ್ತಿದ್ದಾನೆ’ ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಪ್ರಕಾರ ನಾನು ಅಲೆಮಾರಿಗಳ ರಾಜನಂತೆ. ನಾನು ಸ್ವಾಭಿಮಾನಿಯಾಗಿದ್ದೇನೆ. ವಿಶ್ವನಾಥ್‌ನಂತೆ ಬೊಗಳುವ ನಾಯಿಯಲ್ಲ. ಈಗ ತನ್ನ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವುದಕ್ಕಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಪಾಠ ಮಾಡಿಕೊಂಡಿರುತ್ತೇನೆ ಎಂದು ಸಿದ್ದರಾಮಯ್ಯನವರಿಂದ ಟಿಕೆಟ್ ಪಡೆದುಕೊಂಡ. ಆದರೆ, ಪಾಠ ಮಾಡದೇ ಕೀಟಲೇ ಮಾಡಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಎಂಎಲ್‌ಸಿ ಎಚ್.ವಿಶ್ವನಾಥ್ ವಿರುದ್ಧ ಮೈಸೂರು ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದಾರೆ. ‘ಪಕ್ಷವು ಹಾಗೂ ಅದರ ಸಿದ್ದಾಂತವು ಅವರಿಗೆ ಅಪಥ್ಯವಾಗಿದ್ದರೆ, ಇಲ್ಲಿರುವುದು ಯೋಗ್ಯವಲ್ಲ’ ಎಂದು ತಿಳಿಸಿದ್ದಾರೆ. ವಿಶ್ವನಾಥ್ ಅವರು ಪಕ್ಷದಲ್ಲೇ ಇದ್ದುಕೊಂಡು, ಸ್ವಪಕ್ಷೀಯರನ್ನೇ ಚುಚ್ಚುವುದು, ತಿವಿಯುವದನ್ನು ಬಿಡಬೇಕು ಎಂದು ಪ್ರತಾಪಸಿಂಹ ತಿಳಿಸಿದ್ದಾರೆ.
ಹುಣಸೂರು ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಜನರು ಬುದ್ದಿ ಕಲಿಸಿದ್ದಾರೆ. ಆದರೂ, ಅವರು ಬುದ್ದಿ ಕಲಿತಿಲ್ಲ ಎಂದು ಟೀಕಿಸಿದ್ದಾರೆ.
ಈ ನಡುವೆ ಸಂಸದ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಕೇಂದ್ರದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಆಪರೇಷನ್ ಕಮಲದ ಹಣದ ವಹಿವಾಟಿನ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ಸಂಸದರು ನೀಡಿದ ಹಣದ ವಹಿವಾಟಿನ ಹೇಳಿಕೆ ಬಗ್ಗೆ ಪ್ರಕರಣ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ದೂರು ನೀಡಿದ್ದು, ಆಪರೇಷನ್ ಕಮಲ, ಚುನಾವಣೆ ವೇಳೆ ವಿಶ್ವನಾಥ್ 15 ಕೋಟಿ ರೂ. ಪಡೆದಿದ್ದರು ಎಂದು ಸಂಸದ ಶ್ರೀನಿವಾಸ ಪ್ರಸಾದ್ ನೀಡಿದ ಹೇಳಿಕೆ ಬಗ್ಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಲಾಗಿದೆ.