ಸಮಗ್ರ ನ್ಯೂಸ್: ಬಾಂಬೆ ಐಐಟಿಯ ಅಂತಿಮ ವರ್ಷದ 1500 ವಿದ್ಯಾರ್ಥಿಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಉದ್ಯೋಗದ ಆಫರ್ ದೊರೆತಿದೆ. ಐಐಟಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ರಿಲಯನ್ಸ್, ಅದಾನಿ ಗ್ರೂಪ್, ಟಾಟಾ ಗ್ರೂಪ್ ಸೇರಿದಂತೆ ಅನೇಕ ಕಂಪನಿಗಳು ಅಭ್ಯರ್ಥಿಗಳ ಹುಡುಕಾಟದಲ್ಲಿವೆ.
9 ದಿನಗಳ ಬಳಿಕ ಒಟ್ಟು 1,500 ಉದ್ಯೋಗದ ಆಫರ್ ದೊರೆತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳೂ ಸೇರಿದಂತೆ 44 ಕಂಪನಿಗಳು ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡಿವೆ. ಟಿಎಸ್ಎಂಸಿ, ಮೆಕ್ಕಿನ್ಸೆ ಆ್ಯಂಡ್ ಕಂಪನಿ, ಅಮೆರಿಕನ್ ಎಕ್ಸ್ಪ್ರೆಸ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಹೋಂಡಾ ಜಪಾನ್, ಮೋರ್ಗನ್ ಸ್ಟ್ಯಾನ್ಲಿ ಹಾಗೂ ಸ್ಪ್ರಿಂಕ್ಲರ್ ಕೂಡ ಅಭ್ಯರ್ಥಿಗಳ ಹುಟುಕಾಟದಲ್ಲಿವೆ.
1,500 ಆಫರ್ಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಆಫರ್ ದೊರೆತಿದೆ. ಈ ವಿದ್ಯಾರ್ಥಿಗಳು ಆಫರ್ ಅನ್ನು ಸ್ವೀಕರಿಸಿದ್ದಾರೆ ಎಂದು ‘ಬ್ಯುಸಿನೆಸ್ ಟುಡೇ’ ವರದಿ ತಿಳಿಸಿದೆ.
2021-22ರಲ್ಲಿ ಅಂತಾರಾಷ್ಟ್ರೀಯ ಮಟ್ಟದ 66 ಆಫರ್ಗಳು ದೊರೆತಿದ್ದವು. ಆದರೆ ಈ ಬಾರಿ 9ನೇ ದಿನದವರೆಗಿನ ಲೆಕ್ಕಾಚಾರದ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ 71 ಆಫರ್ಗಳು ದೊರೆತಿವೆ ಎಂದು ಬಾಂಬೆ ಐಐಟಿಯ ಉದ್ಯೋಗ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.