Ad Widget .

ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ಬದಲು; ಅವರ ಸಾಹಿತ್ಯ ವೈಭವಿಕರಣವಾಗಲಿ

ಸಮಗ್ರ ವಿಶೇಷ: ಕನ್ನಡ ನಾಡು ನುಡಿ ಪರಂಪರೆಗೆ ತನ್ನದೇ ಆದ ಭವ್ಯ ಇತಿಹಾಸ ಇರುವದು ಜನಜನಿತ. ಸಾಕಷ್ಟು ಮಹನೀಯರ ಸೇವೆ ಶ್ರಮದ ಫಲವಾಗಿ, ಶ್ರೇಷ್ಠ ಸಾಹಿತ್ಯ ಕನ್ನಡಕ್ಕೆ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ ಸಾಹಿತ್ಯ ವೈಭವದ ನಾಡ ಹಬ್ಬವಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬರುತ್ತಿವೆ. ಇದಕ್ಕೆ ಕರ್ನಾಟಕ ಸರ್ಕಾರ ಮುತುವರ್ಜಿ ವಹಿಸುವದು. ಪ್ರತಿವರ್ಷವೂ ಒಂದೊಂದು ಜಿಲ್ಲೆಯಲ್ಲಿ ವಿಜೃಂಭಣೆ ವೈಭವದಿಂದ ಎರಡು ಮೂರು ದಿನಗಳ ಕಾಲ ಸಮ್ಮೇಳ ಜರಗುತ್ತದೆ. ನುಡಿ ಹಬ್ಬದಲ್ಲಿ ಲಕ್ಷಾಂತರ ಕನ್ನಡಿಗರು, ಸಾಹಿತ್ಯಾಸಕ್ತರು, ಅಭಿಮಾನಿಗಳು ಭಾಗವಹಿಸುತ್ತಾರೆ. ಸರ್ಕಾರವು ಈ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುತ್ತದೆ. ವಿವಿಧ ಮೂಲಗಳಿಂದ ಸಾಹಿತ್ಯ ಪರಿಷತ್ತು ಸಾಕಷ್ಟು ದೊಡ್ಡ ಮಟ್ಟದ ದೆಣಿಗೆಯನ್ನು ಸಂಗ್ರಹ ಮಾಡುತ್ತದೆ.

Ad Widget . Ad Widget .

ಇಂದಿನ ತಾಂತ್ರಿಕ ಯಾಂತ್ರಿಕ ವೇಗದ ಬದುಕಿನಲ್ಲಿ, ಸಾಹಿತ್ಯ ಕ್ಷೇತ್ರವು ತನ್ನ ಮಗ್ಗಲು ಬದಲಿಸಿಕೊಂಡಿದೆ. ಪುಸ್ತಕದ ಬರವಣಿಗೆ ಬದಲಿಗೆ, ಹೊಸ ವಿದಧ ಸೃಜನಶೀಲ ಸೃಜನೇತರ, ಆಯಾಮದ ಸಂವಹನ ಮಾದ್ಯಮಗಳು ಅಭಿವೃದ್ದಿ ಹೊಂದಿವೆ. ಮುದ್ರಣ ಆದರಿತ ಪುಸ್ತಕ ಸಾಹಿತ್ಯ ಓದುವ ದಾವಂತವಾಗಲಿ, ಸಮಯವಾಗಲಿ ಯುವ ಜನಾಂಗದಲ್ಲಿ ಕಡಿಮೆಯಾಗುತ್ತಿದೆ.

Ad Widget . Ad Widget .

“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬಂತೆ ಸಾಹಿತ್ಯ ಸಮ್ಮೇಳನದ ಪಾರಂಪರಿಕ ಸಂಪ್ರದಾಯದ ಕಾರ್ಯಕ್ರಮದ ಯಾದಿಯಲ್ಲಿ ಹೊಸ ತಲೆಮಾರಿನ ಹೊಸತನದ ಬಹು ಆಯಾಮದ ಸಾಹಿತ್ಯ ಕೃಷಿಗೂ ಮನ್ನಣೆ ನೀಡಬೇಕಿದೆ. ಸಾಹಿತ್ಯ ಸೃಜನಶೀಲತೆಯಲ್ಲಿ ತೊಡಗಿದವರಿಗೂ ಅವಕಾಶಗಳು ವೇದಿಕೆಗಳು ಲಭಿಸಬೇಕಿದೆ.

ಕೆಲವೇ ಗಣ್ಯ ಸಾಹಿತಿ ಕವಿಗಳಿಗೆ ಸೀಮಿತವಾದ ಅವರ ತೋಳುಬಂದಿಯ ತೆಕ್ಕೆಯಲ್ಲಿರುವ ಸಾಹಿತ್ಯ ಸಮ್ಮೇಳನಗಳು, ಗೋಷ್ಠಿಗಳು, ವೇದಿಕೆಗಳು ಮುಕ್ತವಾಗಿ ಹೊಸ ತಲೆಮಾರಿನವರಿಗೆ ಸ್ವಾಗತಿಸಬೇಕಿದೆ. ಯಾವುದೇ ಹಿನ್ನಲೆ ಇಲ್ಲದೇ, ಸ್ವ ಪ್ರತಿಭೆ ಸೃಜನಶೀಲತೆಯಿಂದ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಕವಿಯು ಮುನ್ನಲೆಗೆ ತರಬೇಕು. ಕನ್ನಡ ಸಾಹಿತ್ಯ ಪರಿಷತ್ ಅರ್ಹ ಯೋಗ್ಯ ಸಮರ್ಥ ಕವಿಗಳ, ವಿದ್ವಾಂಸರ, ಚಿಂತಕರ, ಸಂಶೋಧಕರ ಸಾಹಿತಿಗಳ ಕೂಟವಾಗಬೇಕು.

ಸಾರ್ವಜನಿಕರಿಂದ ಬೆಷ್ ಎನಿಸಿಕೊಂಡ, ಸಾಮಾಜಿಕ ಜಾತತಾಣಗಳ ಮೂಲಕ ಹೆಸರುವಾಸಿಯಾದ, ಸದಭಿರುಚಿಯ ಹೊಸ ತಲೆಮಾರಿನ ಆಧುನಿಕ ಸೃಜನಶೀಲ ಹಾಗೂ ಸೃಜನೇತರ ಸಾಹಿತಿ ಬರಹಗಾರರಿಗೂ ಸೂಕ್ತ ಸ್ಥಾನ ಮಾನ ಮನ್ನಣೆ ಗೌರವ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಲಭಿಸಬೇಕಿದೆ.

ಪ್ರಜಾಪ್ರಭುತ್ವದ ಮೂಲ ತತ್ವವಾದ ಸಾಮಾಜಿಕ ಸಮಾನತೆಯು ಸಾಹಿತ್ಯ ಕ್ಷೇತ್ರದಲ್ಲೂ ಬೆರುರಬೇಕು. ಲಿಂಗ ಜಾತಿ ಧರ್ಮ ಆದರಿತ ತಾರತಮ್ಯ ತೊಲಗಬೇಕಿದೆ. “ರಾಜಕೀಯವು ಸಾಹಿತ್ಯದಿಂದ ದೂರ ಉಳಿದಾಗ ಮಾತ್ರ, ಬರಹಗಾರನ ಮುಕ್ತ ನೈಜ ಬರಹ ಅಭಿವ್ಯಕ್ತಗೊಳ್ಳಲು ಸಾಧ್ಯವಿದೆ”. ಇಲ್ಲದೇ ಹೋದರೆ, ಆಧುನಿಕ ಕಾಲದಲ್ಲೂ ರಾಜ್ಯ ರಾಜಾಶ್ರಯ ಪಡೆದ ಹೊಗಳು ಬಟ್ಟಂಗಿಗಳೇ ನಿಜ ಸಾಹಿತಿಗಳಾಗಿ ಮುಕ್ತ ಅಭಿವ್ಯಕ್ತತೆ ಸತ್ತುಹೋಗುವದು.

ಇಂದಿನ ಕವಿ ಸಾಹಿತಿ ಬರಹಗಾರನ ಬರವಣಿಗೆಯು ಕೇವಲ ರಮ್ಯತೆ, ಅತಿರಂಜಕತೆ, ವೈಭವ ಕಲ್ಪನೆಯ ಆಹ್ಲಾದ ಸಂತೋಷ ಉಂಟುಮಾಡುವದಷ್ಟೇ ಅಲ್ಲ. ಕಾಲ ಕಾಲಕ್ಕೆ ಬದಲಾಗುವ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚಲ್ಲುವ, ವ್ಯವಸ್ಥೆ ಕಿವಿಹಿಂಡುವ ಸಾಮಾಜಿಕ ಜವಾಬ್ದಾರಿಯ ದಿಕ್ಸೂಚಿ ಕೆಲಸವೂ ಮಾಡಬೇಕಿದೆ.

ಇತ್ತಿಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಪ್ರದರ್ಶನಕ್ಕಿಂತಲೂ ವ್ಯಕ್ತಿ ವೈಭವ ಹಾಗೂ ಪ್ರತಿಷ್ಠೆಯೇ ಹೆಚ್ಚಾಗಿ ರಾಚುತ್ತಿದೆ. ಕಟೌಟ್ ಗಳು, ಭವ್ಯ ವೇದಿಕೆ, ಸೌಂಡ್ ಅಲಂಕಾರಕ್ಕೆ ಪ್ರಾದಾನ್ಯತೆ ಹೆಚ್ಚಿದೆ. ಗೋಷ್ಠಿ ಕೇಳುವ, ಚರ್ಚೆಯಲ್ಲಿ ಭಾಗವಹಿಸುವ ಚಿಂತನ ಮಂಥನ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾಗವಹಿಸುವ ಜನರೂ ಕೂಡಾ ಮನರಂಜನೆಗೆ ಹೆಚ್ಚಿನ ಒಲವು ತೋರಿಸಿದಂತಿದೆ.

ತಾಲ್ಲೂಕು, ಜಿಲ್ಲಾ ಹಂತಗಳಿಂದ ಹಿಡಿದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರೆಗೂ, ಕೆಲವು ಸಂದರ್ಭಗಳಲ್ಲಿ ಒಂದೇ ರೀತಿಯ ಶಿಷ್ಠಾಚಾರ ಸಂಪ್ರದಾಯ ಅನುಸರಿಸಲಾಗುತ್ತದೆ. ಗಣ್ಯ ಶ್ರೇಷ್ಠ ಸಾಹಿತಿಯನ್ನು ಸಮ್ಮೇಳನದ ಸರ್ವಾದ್ಯಕ್ಷರನ್ನಾಗಿ ಮಾಡಿ, ಸಾರೋಟಿನಲ್ಲಿ ಕುಳ್ಳಿರಿಸಿ, ಊರುತುಂಬಾ ಮೇರವಣಿಗೆ ಮಾಡಲಾಗುತ್ತದೆ. ಇದು ಸಾಹಿತ್ಯ ಸಮ್ಮೇಳನದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ.

ತಾಲ್ಲೂಕು ಹಂತದ ಕೆಲವು ಸಾಹಿತ್ಯ ಸಮ್ಮೇಳನಗಳು, ತನ್ನ ಮೂಲ ಆಶಯವನ್ನೇ ಬದಲಿಸಿಕೊಂಡಿವೆ. ಸಮ್ಮೇಳನ ಅಧ್ಯಕ್ಷರ ಆಯ್ಕೆ, ಅವರ ಮೇರವಣಿಗೆ ದಿಕ್ಕು ತಪ್ಪುತ್ತಿವೆ. ಇದರಲ್ಲಿ ಜಾತಿ ರಾಜಕೀಯ ಪ್ರತಿಷ್ಠೆಗಳು ಒಳ ನುಸುಳುತ್ತಿದೆ.
ತಾಲ್ಲೂಕು ಹಂತದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಅಲಂಕೃತ ಸಾರೋಟು, ಅದರೊಳಗೆ ಉತ್ಸವ ಮೂರ್ತಿಯಂತೆ ಅಧ್ಯಕ್ಷರನ್ನು ಕಳ್ಳಿರಿಸುವದು, ಅಕ್ಕ ಪಕ್ಕ ರಾಜಕೀಯ ಮುಖಂಡರು ಅಥವಾ ಕ್ಷೇತ್ರ ಎಂ ಎಲ್ ಎ ಕೂಡುವದು, ದೈತ್ಯ ಡಿಜೆ ಸೌಂಡ್ ನಲ್ಲಿ ಅಬ್ಬರದ ಕುಣಿತಗಳು ಇದೆಲ್ಲವೂ ರೆಸಿಗೆ ಹುಟ್ಟಿಸುವಂತಿವೆ. ವ್ಯಕ್ತಿ ವೈಭವಿಕರಣವು ಪ್ರಜಾಪ್ರಭುತ್ವದಲ್ಲಿ ಸಲ್ಲದು. ವ್ಯವಸ್ಥೆಗೆ ಇದು ಮಾರಕ.

ಸಾರೋಟಿನಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಕುಳ್ಳಿರಿಸಿ ಮೆರೆಸುವದಕ್ಕಿಂತಲೂ, ಅವರಿಂದ ಸೃಷ್ಠಿಯಾದ ಸಾಹಿತ್ಯದ ವೈಭವದ ಮೆರವಣಿಗೆ ಆಗಬೇಕು. ಸೃಜಿಸಿದ ಸಾಹಿತ್ಯವು ಸಮಾಜದ ಎದುರಿಗೆ ರಾರಾಜಿಸಬೇಕು. ಈ ಹಿಂದಿನ ಮೈಸೂರು ಒಡೆಯರ ಸಂಸ್ಥಾನದ ನಾಡ ಹಬ್ಬ ದಸರಾದಲ್ಲಿ ಮೈಸೂರು ಅರಸರನ್ನು ಅಂಬಾರಿಯಲ್ಲಿ ಕುಡಿಸಿ ಮೇರವಣಿಗೆ ಮಾಡಲಾಗುತ್ತಿತ್ತು. ರಾಜಪರಂಪರೆ ಗತಿಸಿದ ಮೇಲೆ ಸಂವಿಧಾನದಲ್ಲಿ ಎಲ್ಲರೂ ಸಮಾನರಾದ ಕಾರಣ, ಅಂಬಾರಿಯಲ್ಲಿ ಚಾಮುಂಡಿದೇವಿ ಉತ್ಸವ ಮೂರ್ತಿ ಮೆರವಣಿಗೆ ಮಾಡುವ ಪರಿಪಾಠ ಆರಂಭವಾಯಿತು. ಹೀಗಾಗಿ ಕವಿ ರಚಿಸಿದ ಸಾಹಿತ್ಯ ಜನಮನ್ನಣೆ ಪಡೆಯಬೇಕೆ ವಿನಃ ಭೌತಿಕ ಶರೀರದ ಸಾಹಿತಿಯಲ್ಲ. ಸಮ್ಮೇಳನಾಧ್ಯಕ್ಷರ ಮೇರವಣಿಗೆಯು ಜನರ ಶೋಷಣೆಯ ಪ್ರತಿಭಿಂಬದಂತೆ ತೋರುತ್ತಿದೆ.

ಈ ವರೆಗೂ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ, ಪ್ರತಿಷ್ಠಿತ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸ್ವಾಗತಾರ್ಹವೆ. ಆದರೆ, ಅಯ್ಕೆ ಮಾನದಂಡಗಳು ಪ್ರಕ್ರೀಯೆ ಮಾತ್ರ ಸಾರ್ವಜನಿಕರಿಗೆ ಲಭ್ಯವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಪ್ರಜಾತಾಂತ್ರಿಕವಾಗಿ ಆಯ್ಕೆ ಮಾಡಿದರೆ, ಇನ್ನಷ್ಟು ಪಾರದರ್ಶಕತೆ ಗೌರವ ಮೆರಗು ಹೆಚ್ಚುತ್ತದೆ.

ಅಖಿತ ಭಾರತ ಸಾಹಿತ್ಯ ಸಮ್ಮೇಳನಗಳು, ಸರ್ಕಾರದ ಅನುದಾನ ಹಾಗೂ ಸಮ್ಮೇಳನ ನಡೆಯುವ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ಸಂಬಳ ಹಾಗೂ ವಿವಿಧ ಸಂಘ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ದೆಣಿಗೆ ಸಂಗ್ರಹ ಮೂಲಕ ಜರಗುತ್ತವೆ. ಸಾರ್ವಜನಿಕರ ತೇರಿಗೆ ಹಣವು ಇದರಲ್ಲಿ ಸೇರುವ ಕಾರಣ, ಪಾರದರ್ಶಕತೆ ಕಾಪಾಡುವದು ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯಾಗಿದೆ.

ಪ್ರಹ್ಲಾದ್ ವಾ ಪತ್ತಾರ
ಯಡ್ರಾಮಿ ಕಲ್ಬುರ್ಗಿ ಜಿ

Leave a Comment

Your email address will not be published. Required fields are marked *