Ad Widget .

ಕಾಂಗ್ರೆಸ್ ಗೆ ಸಿಕ್ಕಿದ ಹಿಮಾಚಲ ಪ್ರದೇಶ ದಕ್ಕಲು ಬಿಟ್ಟೀತೆ ಬಿಜೆಪಿ| ಪಕ್ಷೇತರ ಓಲೈಕೆಗೆ ಕೇಸರಿ ಪಾಳಯ ಮುಂದಾಗಿದ್ದೇಕೆ?

ಸಮಗ್ರ ನ್ಯೂಸ್: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಮುಗಿದು ರಿಸಲ್ಟ್ ಬಂದಿದೆ. ಗುಜರಾತ್ ನಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡು ವಿರೋಧ ಪಕ್ಷಗಳನ್ನು ಧೂಳಿಪಟ ಮಾಡಿದೆ. ಬರೋಬ್ಬರಿ 156 ಸೀಟುಗಳನ್ನು ಗಳಿಸಿ ಏಳನೇ ಬಾರಿಗೆ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿದಿದೆ.

Ad Widget . Ad Widget .

ಇನ್ನು ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಗುಡ್ಡಗಾಡಿನ ಜನ ಸೋಲಿನ ರುಚಿ ತೋರಿಸಿದ್ದಾರೆ. ಅಚ್ಚರಿಯೆಂಬಂತೆ 40 ಸ್ಥಾನಗಳನ್ನು ಗಳಿಸಿಕೊಂಡ ಕಾಂಗ್ರೆಸ್ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ.

Ad Widget . Ad Widget .

ಕಾಂಗ್ರೆಸ್ ಹಿಮಾಚಲದಲ್ಲಿ ಗೆದ್ದರೂ ಸಂಭ್ರಮ ಪಡುವ ಸ್ಥಿತಿಯಲ್ಲಿಲ್ಲ. ಸಿಎಂ ಸ್ಥಾನಕ್ಕಾಗಿ ಈಗಾಗಲೇ ಏಳು ಮಂದಿ ನಾಯಕರು ಟವಲ್ ಹಾಕಿದ್ದು, ಒಂಥರಾ ಭಿನ್ನಮತದ ವಾಸನೆ ಹೊಡೆಯುತ್ತಿದೆ. ಇದನ್ನೇ ಬಿಜೆಪಿ ಎನ್ ಕ್ಯಾಶ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಒಟ್ಟು ಸ್ಥಾನಗಳ ಪೈಕಿ ಮೂವರು ಪಕ್ಷೇತರರು ಗೆದ್ದಿದ್ದು ಇವರನ್ನು ಬಿಜೆಪಿ ತನ್ನತ್ತ ಸೆಳೆಯುವ ಕಸರತ್ತು ನಡೆಸುತ್ತಿದ್ದು, ಕಾಂಗ್ರೆಸ್ ಗೂ ಆಪರೇಶನ್ ಕಮಲ ಭೀತಿ ಎದುರಾಗಿದೆ. ಈಗಾಗಲೇ ಹಲವು ಶಾಸಕರನ್ನು ರೆಸಾರ್ಟ್ ನತ್ತ ಕಾಂಗ್ರೆಸ್ ಕಳುಹಿಸಿದ್ದು, ಸಿಕ್ಕಿದೆ ಅಧಿಕಾರ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಬಿಜೆಪಿಯ ಈ ಹಿಂದಿನ ಟ್ರ್ಯಾಕ್ ಗಮನಿಸಿದಾಗ ಹಲವು ರಾಜ್ಯಗಳಲ್ಲಿ ಇದೇ ಕೆಲಸ ಮುಂದುವರೆಸಿರುವುದನ್ನು ಕಾಣಬಹುದು. ಕರ್ನಾಟಕ, ಮಹಾರಾಷ್ಟ್ರ ರಾಜಾಸ್ಥಾನ ಮಧ್ಯಪ್ರದೇಶಗಳಲ್ಲಿ ಆಪರೇಷನ್ ಮೂಲಕವೇ ಬಿಜೆಪಿ ಅಧಿಕಾರವನ್ನು ಕಸಿದುಕೊಂಡಿದೆ. ಪಂಜಾಬ್, ಹರಿಯಾಣದಲ್ಲೂ ಈ ಕೆಲಸಕ್ಕೆ ಕೈಹಾಕಿದ್ದರೂ ಫಲಪ್ರದವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಹಿಮಾಚಲದಲ್ಲಿ ಇದೇ ಕೆಲಸ ಮುಂದುವರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈಗಾಗಲೇ ಏನೂ ಕಾರಣ ಇಲ್ಲದಿದ್ದರೂ ಪಕ್ಷೇತರರನ್ನು ಸೆಳೆಯುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. 25ಸ್ಥಾನಗಳನ್ನು ಗಳಿಸಿರುವ ಬಿಜೆಪಿಗೆ 35 ಸ್ಥಾನಕ್ಕೆ ತನ್ನನ್ನು ಹೆಚ್ಚಿಸಿಕೊಳ್ಳುವುದು ಕಷ್ಟವಾಗಲಾರದು. ಅಧಿಕಾರಕ್ಕಾಗಿ ಕೇಸರಿಪಾಳಯ ಏನೂ ಬೇಕಾದರೂ ಮಾಡಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ ಬಿಜೆಪಿಗೆ ಸೋಲಿನ ರುಚಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿದ್ದರೆ, ಕಾಂಗ್ರೆಸ್ ಗೆ ಸಿಕ್ಕಿದ ಅಧಿಕಾರ ಉಳಿಸಿಕೊಳ್ಳುವುದೇ ಕಷ್ಟವಾಗುತ್ತಿದೆ.

Leave a Comment

Your email address will not be published. Required fields are marked *