ದಿಸ್ಪುರ್: ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಂತ ಬಿಸ್ವಾ ಶರ್ಮಾ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವತಂತ್ರ ಭಾರತದಲ್ಲಿ ವಾಸಿಸುವ ಪುರುಷನಿಗೆ ಹಿಂದಿನ ಪತ್ನಿಗೆ ವಿಚ್ಛೇದನ ನೀಡದೇ 3-4 ಮಹಿಳೆಯರನ್ನು ಮದುವೆಯಾಗುವ ಯಾವುದೇ ಹಕ್ಕಿಲ್ಲ. ನಾವು ಅಂತಹ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ನಾವು ನ್ಯಾಯವನ್ನು ನೀಡಲು ಪ್ರಯತ್ನಿಸಬೇಕು. ಮುಸ್ಲಿಂ ಹೆಂಗಸರು, ಮುಸ್ಲಿಂ ಹುಡುಗಿಯರು ಹಿಜಬ್ ಧರಿಸಲು ಕೇಳುತ್ತಾರೆ. ಹುಡುಗರು ಕೂಡಾ ಅದನ್ನೇ ಯಾಕೆ ಧರಿಸಬಾರದು? ಮುಸ್ಲಿಂ ಹುಡುಗಿಯರು ಶಾಲೆಗಳಲ್ಲಿ ಯಾಕೆ ಓದಬಾರದು? ನಾವು ಈ ವ್ಯವಸ್ಥೆಗೆ ವಿರುದ್ಧವಾಗಿದ್ದೇವೆ ಎಂದು ಕಿಡಿಕಾರಿದರು.
ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ಅವರಂತಹ ಕೆಲವು ನಾಯಕರು ಇದ್ದಾರೆ. ಅವರು ಮಹಿಳೆಯರಿಗೆ ಆದಷ್ಟು ಬೇಗ ಮದುವೆಯಾಗಿ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳಿದ್ದಾರೆ. ಭೂಮಿ ಫಲವತ್ತಾಗಿದ್ದರೆ ಮಾತ್ರ ಉತ್ತಮ ಬೆಳೆ ನೀಡಲು ಸಾಧ್ಯ ಎಂದು ಹೇಳಿ ಮಹಿಳೆಯ ಹೆರಿಗೆ ಪ್ರಕ್ರಿಯೆಯನ್ನು ಹೊಲಕ್ಕೆ ಹೋಲಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಹೇಗೆ ಸಾಧ್ಯ? ನಮ್ಮ ಮಹಿಳೆಯರು 20-25 ಮಕ್ಕಳಿಗೆ ಜನ್ಮ ನೀಡಬಹುದು. ಆದರೆ ಅವರ ಆಹಾರ, ಬಟ್ಟೆ, ಶಿಕ್ಷಣ ಹಾಗೂ ಇತರ ಎಲ್ಲಾ ವೆಚ್ಚಗಳನ್ನೂ ಅಜ್ಮಲ್ ಅವರೇ ಭರಿಸಬೇಕು. ಹೀಗಾದರೆ ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.
ಮಹಿಳೆಯರ ವೆಚ್ಚವನ್ನು ಪಾವತಿಸಲಾಗದವರಿಗೆ ಮಹಿಳೆಯರ ಹೆರಿಗೆಯ ಕುರಿತು ಉಪನ್ಯಾಸ ನೀಡುವ ಹಕ್ಕು ಯಾರಿಗೂ ಇಲ್ಲ. ನಾವು ನಮ್ಮ ಕೈಲಾದಷ್ಟು ಆಹಾರವನ್ನು ಒದಗಿಸಲು ಹಾಗೂ ಉತ್ತಮ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುವಷ್ಟು ಮಕ್ಕಳಿಗೆ ಮಾತ್ರವೇ ಜನ್ಮ ನೀಡುತ್ತೇವೆ ಎಂದು ಬಿಸ್ವಾ ಶರ್ಮಾ ಟಾಂಗ್ ನೀಡಿದರು.