ಸಮಗ್ರ ನ್ಯೂಸ್: ರಾಜ್ಯದ ವಿವಿಧೆಡೆ ಚಿರತೆ ದಾಳಿ ವಿಪರೀತವಾಗಿದ್ದು, ಇದುವರೆಗೆ ಕಾಡಿನ ನಿರ್ಜನ ದಾರಿಯಲ್ಲಿ ಹೊಂಚು ಹಾಕಿ ದಾಳಿ ಮಾಡುತ್ತಿದ್ದ, ಹೊಲ ಗದ್ದೆಗಳಲ್ಲಿ ಮನುಷ್ಯರ ಮೇಲೆ ಮುಗಿಬೀಳುತ್ತಿದ್ದ ಚಿರತೆ ಈಗ ಮನೆ ಬಾಗಿಲಿಗೇ ಬಂದು ಪ್ರಾಣ ತೆಗೆಯುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದೆ. ಸಂಜೆಯ ಹೊತ್ತು ಮನೆ ಮುಂದೆ ಕುಳಿತಿದ್ದ ಯುವತಿಯ ಮೇಲೆ ದಾಳಿ ಮಾಡಿದ ಚಿರತೆ ಆಕೆಯ ಕುತ್ತಿಗೆಯನ್ನೇ ಹಿಡಿದು ಸಾಯಿಸಿದೆ. ಮೇಘನಾ (20) ಚಿರತೆ ದಾಳಿಯಿಂದ ಮೃತಪಟ್ಟ ಯುವತಿ.
ಕತ್ತಲಾಗುತ್ತಿರುವ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಮನೆ ಮಂದಿಯೆಲ್ಲ ಬೊಬ್ಬೆ ಹೊಡೆದಾಗ ಚಿರತೆ ಓಡಿದೆ. ಕೂಡಲೇ ಮೇಘನಾ ಅವರನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಯುವತಿ ಪ್ರಾಣ ಕಳೆದುಕೊಂಡರು.
ನಡುವೆ. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಶಾಸಕ ಅಶ್ವಿನ್ ಕುಮಾರ್ ಅವರು ಆಸ್ಪತ್ರೆಗೆ ಆಗಮಿಸಿದಾಗ ಸುತ್ತುವರೆದ ಜನರು ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿದರು.
ಚಿರತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಮೇಘನ ಸಾವಿಗೆ ನ್ಯಾಯ ಸಿಗಬೇಕು, ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸುತ್ತಿದ್ದು, ಇಷ್ಟು ದೊಡ್ಡ ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸುತ್ತಿರುವ ಜನಪ್ರತಿನಿದಿಗಳು, ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.