ಸಮಗ್ರ ನ್ಯೂಸ್: ಶಬರಿಮಲೆ ಪಾದಾಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ವೃತಾಧಾರಿಗಳೊಂದಿಗೆ ಶ್ವಾನವೊಂದು ಹೆಜ್ಜೆ ಹಾಕಿ ನೂರಾರು ಕಿ.ಮೀ ಕ್ರಮಿಸಿರುವ ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಧಾರವಾಡದಿಂದ ಕೇರಳದ ಶಬರಿಮಲೆಗೆ ಹೊರಟ ಅಯ್ಯಪ್ಪ ಸ್ವಾಮಿ ಭಕ್ತರಾದ ನಾಗನಗೌಡ ಪಾಟೀಲ್, ಮಂಜು ಹಾಗೂ ರವಿ ಎನ್ನುವವರಿಗೆ ಮಾರ್ಗ ಮಧ್ಯೆ ಶ್ವಾನವೊಂದು ಜೊತೆಯಾಗಿದ್ದು, ವೃತಾಧಾರಿಗಳೊಂದಿಗೆ ತಾನು ಕೂಡ ನೂರಾರು ಕಿಲೋ ಮೀಟರ್ ಕ್ರಮಿಸಿದೆ.
ಮೂವರು ಭಕ್ತರು ಬರಿಗಾಲಿನಲ್ಲಿ ಧಾರವಾಡದಿಂದ ಯಾತ್ರೆ ಪ್ರಾರಂಭಿಸಿದಾಗ ಧಾರವಾಡದ ನರೇಂದ್ರ ಟೋಲ್ ಬಳಿ ಶ್ವಾನ ಜೊತೆಯಾಗಿದೆ. ಪ್ರಾರಂಭದಲ್ಲಿ ಶ್ವಾನ ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದು ಯಾರ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ಶ್ವಾನ ತಮ್ಮ ತಂಡದ ಬೆನ್ನ ಹಿಂದೆಯೇ ಬರುತ್ತಿರುವುದನ್ನು ಕಂಡು ಸ್ವಾಮಿಗಳ ತಂಡ ಅಚ್ಚರಿಗೊಂಡಿದೆ. ಶ್ವಾನಕ್ಕೆ ತಿಂಡಿ ಹಾಕಿದ್ದಾರೆ. ಬಳಿಕವೂ ಹಿಂಬಾಲಿಸಿದೆ.
ಶ್ವಾನವನ್ನು ಹಿಂದೆ ಹೋಗಲಿ ಎಂದು ಓಡಿಸಿದ್ದರೂ ಕೂಡ ತೆರಳದೆ ನಿರಂತರವಾಗಿ 9 ದಿನಗಳ ಕಾಲ ಜೊತೆ ಹೆಜ್ಜೆ ಹಾಕಿದೆ. ಪಾದಯಾತ್ರೆ ವೇಳೆ ಈ ತಂಡದ ಜೊತೆಗ ಹೆಜ್ಜೆ ಹಾಕುವ ಶ್ವಾನ, ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ ಸಂದರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಈ ತಂಡದ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುವ ಶ್ವಾನ, ತಂಡದಿಂದ ಸುಮಾರು ಮುಂದೆ ಹೋಗಿ ತಂಡದ ದಾರಿ ಕಾಯುತ್ತದೆ ಎನ್ನಲಾಗಿದೆ.
ಇನ್ನು ಈ ಪ್ರೀತಿಯ ಶ್ವಾನಕ್ಕೆ ಮಾಳಗಿ ಎಂದು ಹೆಸರಿಸಿದ್ದಾರೆ. ಮಾಳಗಿ ಎಂದರೆ ಶಬರಿಮಲೆಗೆ ಬರುವ ಮಹಿಳಾ ವೃತ್ತಧಾರಿಗಳನ್ನು ಮಾಳಿಗೆಪುರತ್ತಮ್ಮ ಅಂತಾ ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಶ್ವಾನಕ್ಕೆ ಮಾಳಗಿ ಎಂದು ಹೆಸರನ್ನು ಇಡಲಾಗಿದೆ. ಮಾಳಗಿ ಈಗ ನಾಗನಗೌಡ ಪಾಟೀಲ್ , ಮಂಜು ಹಾಗೂ ರವಿ ಅವರ ಪ್ರೀತಿಯ ಶ್ವಾನವಾಗಿದೆ.
ಒಟ್ಟಾರೆ ಭಕ್ತಿಯ ಮಹಿಮೆ ಎಂಬಂತೆ ಶಬರಿಮಲೆ ಯಾತ್ರಿಕರನ್ನು ಹಿಂಬಾಲಿಸಿದ ಶ್ವಾನವೊಂದು ಸಹಸ್ರಾರು ಕಿ.ಮೀ ಚಾರಣ ಮಾಡುತ್ತಿರುವುದು ಎಲ್ಲರಲ್ಲೂ ಅಚ್ಚರಿಮೂಡಿಸಿದೆ.