ಸಮಗ್ರ ನ್ಯೂಸ್: ಒಂದೇ ಓವರ್‌ನಲ್ಲಿ ಭರ್ಜರಿ 7 ಸಿಕ್ಸರ್ ಸಿಡಿಸಿ ರುತುರಾಜ್ ಗಾಯಕ್ ವಾಡ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಅಹಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆಟಗಾರ ರುತುರಾಜ್ ಗಾಯಕ್ವಾಡ್ ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಉತ್ತರ ಪ್ರದೇಶ ಬೌಲರ್ಗಳನ್ನು ಮನಬಂದಂತೆ ದಂಡಿಸಿರುವ ರುತುರಾಜ್ ಕೇವಲ 159 ಎಸೆತಗಳಲ್ಲಿ 220 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ಗೆ ಇಳಿದ ಮಹಾರಾಷ್ಟ್ರದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಸತ್ಯಜಿತ್ ಕೂಡ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಉತ್ತರ ಪ್ರದೇಶ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 159 ಎಸೆತಗಳನ್ನು ಎದುರಿಸಿದ ರುತುರಾಜ್ 10 ಬೌಂಡರಿ, ಬರೋಬ್ಬರಿ 16 ಸಿಕ್ಸರ್ ನೇರವಿನಿಂದ 220 ರನ್ ಬಾರಿಸಿದರು.
ಮಹಾರಾಷ್ಟ್ರ ಇನ್ನಿಂಗ್ಸ್ನ 49ನೇ ಓವರ್‌ನಲ್ಲಿ ಉಗ್ರರೂಪ ತಾಳಿದ ರುತುರಾಜ್ ಒಂದೇ ಓವರ್‌ನಲ್ಲಿ ಬರೋಬ್ಬರಿ 7 ಸಿಕ್ಸರ್ ಸಿಡಿಸಿದರು. ಈ ಓವರ್‌ನಲ್ಲಿ ಒಂದು ನೋ ಬಾಲ್ ಕೂಡ ಆಗಿದ್ದು, ಆ ಎಸೆತದಲ್ಲೂ ರುತುರಾಜ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿದ ದಾಖಲೆಯನ್ನು ರುತುರಾಜ್ ಬರೆದಿದ್ದಾರೆ. ಉತ್ತರ ಪ್ರದೇಶ ಪರ 49ನೇ ಓವರ್ ಎಸೆಯಲು ಬಂದ ವೇಗಿ ಶಿವಂ ಸಿಂಗ್ ಅವರ ಮೊದಲೆರಡು ಎಸೆತಗಳನ್ನು ಮಿಡ್ ಆನ್ನಲ್ಲಿ ಸಿಕ್ಸರ್ಗಟ್ಟಿದರು. 3ನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್ಗಟ್ಟಿದ ರುತುರಾಜ್ 4ನೇ ಎಸೆತವನ್ನು ಮಿಡ್ ಆಫ್ ಮೇಲೆ ಸಿಕ್ಸರ್ ಬಾರಿಸಿದರು. ಬಳಿಕ ಐದನೇ ಎಸೆತ ನೋ ಬಾಲ್ ಆಗಿದ್ದು, ಆ ಎಸೆತವನ್ನು ರುತುರಾಜ್ ಮಿಡ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು. ಬಳಿಕ ಸಿಕ್ಕ ಫ್ರಿ ಹಿಟ್ ಎಸೆತದಲ್ಲೂ ಸಿಕ್ಸರ್ ಸಿಡಿಸಿದ ಗಾಯಕ್ವಾಡ್, 6ನೇ ಎಸೆತವನ್ನು ಮಿಡ್ ಆಫ್ ಮೇಲೆ ಸಿಕ್ಸರ್ಗಟ್ಟಿದರು. ಹೀಗಾಗಿ 49ನೇ ಓವರ್‌ನಲ್ಲಿ ದಾಖಲೆಯ 43 ರನ್ಗಳು ಹರಿದುಬಂದವು.
ಈ ಪಂದ್ಯದಲ್ಲಿ ಬರೋಬ್ಬರಿ 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದ ರುತುರಾಜ್ ಕೇವಲ ಬೌಂಡರಿಗಳಿಂದಲೇ 136 ರನ್ ಕಲೆ ಹಾಕಿದರು. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ದಾಖಲೆಯನ್ನು ರುತುರಾಜ್ ಬರೆದರು. ಮತ್ತೊಂದೆಡೆ, ಒಂದು ಓವರ್‌ನಲ್ಲಿ 43 ರನ್ ನೀಡಿದ ದುಬಾರಿ ಬೌಲರ್ ಎನ್ನುವ ಕುಖ್ಯಾತಿಗೆ ಶಿವ ಸಿಂಗ್ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ಒಂದೇ ಓವರ್‌ನಲ್ಲಿ 38 ರನ್ ನೀಡಿದ ವೇಗಿ ಜೇಮ್ಸ್ ಫುಲ್ಲರ್ ಹೆಸರಿನಲ್ಲಿತ್ತು.