ಸಮಗ್ರ ನ್ಯೂಸ್: ರಾಜ್ಯ ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಮಡೆ ಸ್ನಾನಕ್ಕೆ ನ್ಯಾಯಾಲಯ ನಿಷೇಧ ಹೇರಿತ್ತು.
ಬ್ರಾಹ್ಮಣರು ತಿಂದು ಉಳಿಸಿದಂತಹ ಎಲೆಯ ಮೇಲೆ ಭಕ್ತಾಧಿಗಳು ಈ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಸೇವೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನ್ನು ನಿಷೇಧಗೊಳಿಸಿ ಆದೇಶ ಹೊರಡಿಸಿದ ಬಳಿಕ ಕ್ಷೇತ್ರದಲ್ಲಿ ದೇವರಿಗೆ ನೈವೇದ್ಯವಿಟ್ಟ ಅನ್ನವನ್ನು ಗೋವುಗಳಿಗೆ ತಿನ್ನಿಸಿದ ಬಳಿಕ ಆ ಎಲೆಯ ಮೇಲೆ ಭಕ್ತಾಧಿಗಳು ಉರುಳುಸೇವೆ ಮಾಡುವ ಎಡೆಮಡೆಸ್ನಾನ ಪದ್ಧತಿಯನ್ನು ಆರಂಭಿಸಲಾಗಿದೆ.
ಕೊರೊನಾ ಮಹಾಮಾರಿ ಹಿನ್ನಲೆ ಕಳೆದ ಎರಡು ವರ್ಷಗಳಿಂದ ಎಡೆಮಡೆಸ್ನಾನ ಆಚರಣೆಯನ್ನು ದೇವಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಈ ಬಾರಿ ಮತ್ತೆ ಪ್ರಾರಂಭವಾಗಿದ್ದು. ಇಂದು ಒಟ್ಟು 116 ಭಕ್ತರು ಎಡೆಮಡೆಸ್ನಾನ ನೆರವೇರಿಸಿದ್ದಾರೆ.
ಎಡೆಮಡೆಸ್ನಾನದಲ್ಲಿ ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವಿಗೆ ತಿನ್ನಿಸಲಾಗುತ್ತದೆ. ಗೋವು ತಿಂದು ಉಳಿಸಿದ ಎಲೆಗಳ ಮೇಲೆ ಭಕ್ತಾಧಿಗಳು ಉರುಳು ಸೇವೆ ಮಾಡುತ್ತಾರೆ. ಚರ್ಮವ್ಯಾಧಿ ಮತ್ತು ಇತರ ರೋಗಗಳಿದ್ದವರು ಈ ಸೇವೆ ನೆರವೇರಿಸಿದರೆ ರೋಗ ಉಪಶಮನವಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿ ಇದೆ.