ಸಮಗ್ರ ನ್ಯೂಸ್: ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಹಳಷ್ಟು ಕಂಪನಿಗಳು ನಷ್ಟ ತೋರಿಸಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ 4 ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಸುಮಾರು 1,100ಕ್ಕೂ ಹೆಚ್ಚು ಕಂಪನಿಗಳು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ನಷ್ಟ ಕಂಡಿವೆ.
ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಬರೋಬ್ಬರಿ 7,562.8 ಕೋಟಿ ರೂ ನಷ್ಟ ಹೊಂದಿರುವುದು ಅದರ ವರದಿಯಿಂದ ತಿಳಿದುಬರುತ್ತದೆ. ಈ ಕ್ವಾರ್ಟರ್‌ನಲ್ಲಿ ಅತಿಹೆಚ್ಚು ನಷ್ಟ ಹೊಂದಿದ ಕಂಪನಿ ಎಂಬ ಮುಜುಗರದ ದಾಖಲೆ ವೊಡಾಫೋನ್‌ಗೆ ಸಿಕ್ಕಿದೆ.
ಇತ್ತೀಚೆಗೆ ಪೇಟಿಎಂ ಕಂಪನಿ ನಷ್ಟದಲ್ಲಿ ಮುಂದುವರಿದಿರುವುದು, ಅದರ ಷೇರುಗಳು ಪ್ರಪಾತಕ್ಕೆ ಬಿದ್ದಿರುವುದು ದೊಡ್ಡ ಸುದ್ದಿ ಆಗಿದೆ. ಪೇಟಿಎಂಗಿಂತಲೂ ಹೆಚ್ಚು ನಷ್ಟ ಅನುಭವಿಸಿದ 9 ಕಂಪನಿಗಳಿವೆ. ಹಲವು ಕಂಪನಿಗಳ ಷೇರುಗಳು ಗಣನೀಯವಾಗಿ ಇಳಿಮುಖವಾಗಿದೆ.
ಕಳೆದ 1 ವರ್ಷದ ಅವಧಿಯಲ್ಲಿ ಷೇರುಪೇಟೆಯಲ್ಲಿ ಹೊಂದಿದ್ದ ಗರಿಷ್ಠ ಬೆಲೆಗೆ ಹೋಲಿಸಿದರೆ ಪೇಟಿಎಂ ಷೇರುಗಳು ಶೇ. 70ಕ್ಕಿಂತ ಹೆಚ್ಚು ಬೆಲೆ ಕಳೆದುಕೊಂಡಿವೆ. ವೊಡಾಫೋನ್ ಐಡಿಯಾದ ಷೇರು ಕೂಡ ಶೇ. 50ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.
ವೊಡಾಫೋನ್ ಐಡಿಯಾ, ಪೇಟಿಎಂ ಷೇರುಗಳು ಪ್ರಪಾತಕ್ಕೆ ಬಿದ್ದರೂ ವಿಶ್ಲೇಷಕರು ಈ ಕಂಪನಿಗಳ ಷೇರುಗಳ ಮೇಲೆ ಈಗಲೇ ಹಣ ಹಾಕಬೇಡಿ ಎಂದು ಹೂಡಿಕೆದಾರರಿಗೆ ಸಲಹೆ ನೀಡುತ್ತಾರೆ.
ಐಟಿ, ಬ್ಯಾಂಕಿಂಗ್ ಮತ್ತು ಆಟೊಮೊಬೈಲ್ ಕ್ಷೇತ್ರದ ಸಂಸ್ಥೆಗಳ ಷೇರುಗಳು ಮೇಲೆ ಹಣ ಹಾಕಬಹುದು ಎಂಬುದು ಹಲವು ಹಣಕಾಸು ವಿಶ್ಲೇಷಣಾ ಸಂಸ್ಥೆಗಳ ಶಿಫಾರಸು.
ದೊಡ್ಡ ಬಂಡವಾಳದ ಬ್ಯಾಂಕುಗಳು, ಕೈಗಾರಿಕೆ, ರಿಯಲ್ ಎಸ್ಟೇಟ್, ವಿದ್ಯುತ್, ಆಟೊಮೊಬೈಲ್, ಫಾರ್ಮಾ, ಗ್ಯಾಸ್, ಇನ್ಷೂರೆನ್ಸ್ ಈ ಕ್ಷೇತ್ರದ ಷೇರುಗಳನ್ನು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಸಂಸ್ಥೆ ರೆಕಮೆಂಡ್ ಮಾಡಿದೆ.