ನಾಗಪುರ: 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ಗುಜರಿ ಹಾಕಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಭಾರತ ಸರ್ಕಾರಕ್ಕೆ ಸೇರಿದ 15ಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಸ್ಕ್ರ್ಯಾಪ್ ನೀತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದರು.
ಕೇಂದ್ರಕ್ಕೆ ಸಂಬಂಧಿಸಿದ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕಡತವೊಂದಕ್ಕೆ ಈಗಾಗಲೇ ನಾನು ಸಹಿ ಹಾಕಿದ್ದೇನೆ. ರಾಜ್ಯಗಳು ಕೂಡಾ ಇದನ್ನು ಅಳವಡಿಸಿಕೊಳ್ಳಬೇಕು ಎಂದವರು ತಿಳಿಸಿದರು.
ಪಾಣಿಪತ್‌ನಲ್ಲಿ ಇಂಡಿಯನ್ ಆಯಿಲ್‌ನ ಎರಡು ಸ್ಥಾವರಗಳು ಆರಂಭಗೊಂಡಿವೆ. ದಿನಕ್ಕೆ ಲಕ್ಷ ಲೀಟರ್ ಎಥೆನಾಲ್ ಉತ್ಪಾದನೆ ಇದರ ಮುಖಾಂತರ ಆಗಲಿದೆ. ಇನ್ನೊಂದು ಸ್ಥಾವರದಲ್ಲಿ ಭತ್ತದ ಹುಲ್ಲು ಬಳಸಿಕೊಂಡು ದಿನಕ್ಕೆ 150 ಟನ್ ಬಯೋ-ಬಿಟುಮೆನ್ ಉತ್ಪಾದನೆ ಆಗಲಿದೆ. ಮಾಲಿನ್ಯ ನಿಯಂತ್ರಣಕ್ಕೂ ಇದು ಕೊಡುಗೆ ನೀಡಲಿದೆ ಎಂದು ಗಡ್ಕರಿ ವಿವರೊಸಿದರು.