ಸಮಗ್ರ ನ್ಯೂಸ್: ಕಾಂತಾರ ಸಿನಿಮಾ ಕರಾವಳಿಯ ದೈವಾರಾಧನೆಯನ್ನು ಪ್ರಪಂಚದಾದ್ಯಂತ ಪರಿಚಯಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಈಗ ದೈವಕೋಲ, ದೈವಸ್ಥಾನದ ವೈಭವ ಶುರುವಾಗಿದ್ದು, ಕರಾವಳಿಯಲ್ಲಿ ಕೋಲಾಹಲ ಹಬ್ಬಿದೆ.
ಕಾಂತಾರ ಸಿನಿಮಾ ಅಬ್ಬರದ ಓಟದ ಹಿಂದೆ ದೈವಶಕ್ತಿಯ ಪ್ರೇರಣೆ ಇದೆ ಅನ್ನೋದು ಚಿತ್ರತಂಡದ ಮಾತು. ಕರಾವಳಿಯ ಭಾಗದ ದೈವಾರಾಧನೆ ಸಂಸ್ಕೃತಿ ಈಗ ಇಡಿ ದೇಶಕ್ಕೆ ಚಿರಪರಿಚಿತವಾಗಿದೆ. ಆದರೆ ಈಗ ಬೆಂಗಳೂರಿನಲ್ಲಿ ಮಾತ್ರ ಹೊಸ ದೈವದ ವಿಚಾರದಲ್ಲಿ ದೊಡ್ಡ ಸಮರ ಶುರುವಾಗಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಈಗ ಕೊರಗಜ್ಜನ ದೈವಸ್ಥಾನ ಶುರುವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಇದೇ ಭಾನುವಾರ ದೈವಕೋಲವೂ ನಡೆಯಲಿದೆ ಅಂತಾ ಆಮಂತ್ರಣ ಪತ್ರಿಕೆಯೂ ಶುರುವಾಗಿದೆ. ಇಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಕುಟುಂಬ ನಮಗೆ ಕೊರಗಜ್ಜ ಕನಸಲ್ಲಿ ಬಂದು ಇಲ್ಲಿ ನೆಲೆಯಾಗುತ್ತೇನೆ ಅಂತಾ ಹೇಳಿದ್ದು, ಕಲ್ಲು ಸಿಕ್ಕಿದೆ ಅನ್ನುತ್ತಿದ್ದಾರೆ. ಆದರೆ ಇದೆಲ್ಲವೂ ದುಡ್ಡಿನ ಬ್ಯುಸಿನೆಸ್ ಆಗಬಾರದು. ಕರಾವಳಿಯಲ್ಲಿ ದೈವಸ್ಥಾನ, ಭೂತಕೋಲ ನಡೆಯೋದು. ಅದನ್ನು ಬಿಟ್ಟು ಬೇರೆ ಕಡೆ ದುಡ್ಡಿಗಾಗಿ ದೈವ, ಕರಾವಳಿಯ ಭಕ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಅಂತಾ ಕರಾವಳಿಯ ದೈವವನ್ನು ನಂಬುವ ಜನ ಕಿಡಿಕಾರುತ್ತಿದ್ದಾರೆ. ಹೀಗಾಗಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಮಹಿಳೆಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ನಾಗಾರಾಧನೆ ಮತ್ತು ದೈವರಾದನೆಗಳು ತುಳುನಾಡಿನಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ. ಕಾಂತಾರ ಚಿತ್ರದ ನಂತರ ಮೈಸೂರು ಬೆಂಗಳೂರು ಭಾಗಗಳಲ್ಲೂ ದೈವಾರಾಧನೆ ಆರಂಭವಾಗಿದೆ. ಈ ವಿಚಾರ ಈಗ ಬಹು ಚರ್ಚೆಯಲ್ಲಿದೆ. ಕರಾವಳಿಯ ಮಣ್ಣಿನ ಸಂಸ್ಕೃತಿಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಕೂಗು ಎದ್ದಿದೆ. ನೀತಿ ನಿಯಮ ಸಂಪ್ರದಾಯ ಮತ್ತು ಕಟ್ಟುಕಟ್ಟಲೆಯನ್ನು ಮೀರಿ ಘಟ್ಟದ ಮೇಲೆ ಆಚರಣೆಗಳನ್ನು ನಡೆಸಬಾರದು. ಆಯಾಯ ಊರಿನ ಸಂಪ್ರದಾಯಗಳನ್ನು ಆ ಭಾಗದ ಜನರು ಆಚರಣೆ ಮಾಡಬೇಕು ಎಂದು ದೈವರಾದಕ ಮೋಹನ್ ಭಟ್ ಹೇಳಿದ್ದಾರೆ.
ಒಟ್ಟಿನಲ್ಲಿ ದೈವಕೋಲ ದೈವನರ್ತನ ಕರಾವಳಿಯಲ್ಲಿ ನಡೆಯಬೇಕು, ಅದನ್ನು ಹೊರತುಪಡಿಸಿ ಬೇರೆ ಕಡೆ ನಡೆದ್ರೇ ದೈವದ ಪವಾಡ ನಡೆಯಲ್ಲ. ಅದ್ರ ಶುದ್ಧತೆಗೆ ಧಕ್ಕೆ ಬರುತ್ತದೆ ಅನ್ನೋದು ಕರಾವಳಿ ದೈವ ಆರಾಧನೆ ಮಾಡುವವರ ಆಕ್ರೋಶವಾಗಿದೆ