ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದೆ.
ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ.
ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ.
ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.