ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ಈ ಬಗೆಗಿನ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.
ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಫೋಟಕ್ಕೂ ಮುನ್ನಾ ದಿನ ಅಂದರೆ ನವೆಂಬರ್ 18ರಂದು ಬಂಟ್ವಾಳದ ಕಕ್ಕಿಂಜೆಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು, ನವೆಂಬರ್ 19ರ ಸಂಜೆ 4:29ರ ಹೊತ್ತಿಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶಾರೀಕ್, ಸ್ಲೀಪರ್ ಸೆಲ್‌ಗಳ ಜತೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯ 2, ಉಡುಪಿ ಜಿಲ್ಲೆಯ ಒಂದು ಕಡೆ ಹಾಗು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಟಲೈಟ್ ಫೋನ್ ಲೊಕೇಷನ್ ಅನ್ನು ಬೇಹುಗಾರಿಕಾ ಏಜೆನ್ಸಿಗಳು ಟ್ರೇಸ್ ಮಾಡಿವೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಪದೇ ಪದೇ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್‌ಗಳು ಬಳಕೆಯಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸಿದ್ದವು.