ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ವಿಶೇಷ ನ್ಯಾಯಾಲಯವು 43 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ 50,000 ದಂಡ ವಿಧಿಸಿದೆ.
ಬಿಹಾರ ಮೂಲದ ಕಾರ್ಮಿಕ ಎಂ.ಡಿ.ನಾಜೀಮ್ ಪ್ರಕರಣ ಆರೋಪಿ. ಈತ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಮಾಲೀಕತ್ವದ ಟಿ ನರಸೀಪುರ ಮುಖ್ಯರಸ್ತೆಯಲ್ಲಿರುವ ವಿನೀಶ್ ದರ್ಶನ್ ಕಾಟೇವಾರಿ ಸ್ಟಡ್ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದ. ಈತ 10 ವರ್ಷದ ಬಾಲಕಿ ಮೇಲೆ ಲೈಂಗಿಕ ಅಪರಾಧ ಎಸಗಿದ್ದ. ಈ ಕಾರಣ ಆತನಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 43 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಪೋಕ್ಸೊ ಅಡಿಯಲ್ಲಿ ದೀರ್ಘಾವಧಿ ಶಿಕ್ಷೆ ವಿಧಿಸಿದ ದೇಶದ ಮೊದಲ ಪ್ರಕರಣ ಇದಾಗಿದೆ. ಸಂತ್ರಸ್ತ ಬಾಲಕಿಯು ಪೋಷಕರಿಗೆ ಮಾಹಿತಿ ನೀಡಿದ್ದಳು.
ಸಂತ್ರಸ್ತ ಬಾಲಕಿಯ ಪೋಷಕರು ಅದೇ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಅಕ್ಟೋಬರ್ 13 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗುವಿನ ತಾಯಿ ಫಾರ್ಮ್ ಹೌಸ್ ಮ್ಯಾನೇಜರ್ ನಾಗರಾಜ್ ಜೊತೆಗೆ ಅಕ್ಟೋಬರ್ 15 ರಂದು ಮೈಸೂರು ಗ್ರಾಮಾಂತರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತೋಟದ ಮನೆ ವ್ಯವಸ್ಥಾಪಕ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಶೇಷ ಕೋರ್ಟ್ನ ನ್ಯಾಯಾಧೀಶೆ ಶೈಮಾ ಕಮರೋಜ್ ಈ ತೀರ್ಪು ನೀಡಿದ್ದಾರೆ. ಇದೇ ವೇಳೆ ಸಂತ್ರಸ್ತ ಬಾಲಕಿಗೆ 7 ಲಕ್ಷ ರು. ಪರಿಹಾರ ನೀಡುವಂತೆ ಸಲಹೆ ಮಾಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು. 2021ರಲ್ಲಿ 10 ವರ್ಷದ ಬಾಲಕಿ ಮೇಲೆ ಆರೋಪಿಯು ನಿರಂತರ ಅತ್ಯಾಚಾರ ಎಸಗಿದ್ದ.