ಸಮಗ್ರ ನ್ಯೂಸ್: ರಾಜ್ಯದ ನಂಬರ್ ವನ್ ಯಾತ್ರಾಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂಭ್ರಮ ಹೆಚ್ಚುತ್ತಿದೆ. ದೇಗುಲದಲ್ಲಿ ಇದೀಗ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಭಕ್ತಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಕೆಲಕಾಲ ಸ್ತಬ್ಧವಾಗಿದ್ದ ಧರ್ಮ ದಂಗಲ್ ಕೂಡಾ ಶುರುವಾಗುವ ಲಕ್ಷಣ ಕಂಡುಬಂದಿದೆ.
ದೇವಳದ ಚಂಪಾಷಷ್ಠಿಯ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಮತ್ತೊಂದು ವಿವಾದಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಾಕ್ಷಿಯಾಗುವ ಲಕ್ಷಣಗಳು ಕಂಡುಬಂದಿದೆ.
ಕುಮಾರಧಾರ ಬಳಿಯ ದೇವಸ್ಥಾನದ ಪ್ರವೇಶ ದ್ವಾರದ ಸಮೀಪ ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ. ಆದರೆ ದೇವಳದ ಆಡಳಿತ ಮಂಡಳಿ ಅಥವಾ ಅಧಿಕಾರಿ ವರ್ಗಕ್ಕೆ ಇದರ ಬಗ್ಗೆ ಸ್ಪಷ್ಟನೆ ಇಲ್ಲ. ಸದ್ಯ ದೇವಳದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಕೆಲಸದ ನಿಮಿತ್ತ ದ.ಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದು, ಈ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.