ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಆಟೋ ಬ್ಲ್ಯಾಸ್ಟ್ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಪೊಲೀಸರು ಇದೀಗ ಒಂದೊಂದೇ ಮಾಹಿತಿಯನ್ನು ಬಯಲಿಗೆಳೆಯುತ್ತಿದ್ದಾರೆ. ಈ ನಡುವೆ ಎಫ್ ಎಸ್ ಎಲ್ ವರದಿಯಲ್ಲಿ ಆಟೋ ಬ್ಲ್ಯಾಸ್ಟ್ ನಲ್ಲಿ ಲೋಕಲ್ ಬಾಂಬ್ ಬಳಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಶಂಕಿತ ಉಗ್ರ ಕುಕ್ಕರ್ ಬಳಸಿ ಲೋಕಲ್ ಮೇಡ್ ಬಾಂಬ್ ತಯಾರಿಸಿದ್ದ, ಕುಕ್ಕರ್ ನಲ್ಲಿ ಬ್ಯಾಟರ್ ಸರ್ಕ್ಯೂಟ್ ಜೊತೆಗೆ ಸಲ್ಫರ್ ಮಿಶ್ರಿತ ಪೌಡರ್ ಬಳಸಲಾಗಿತ್ತು ಎಂದು ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗಗೊಂಡಿದೆ.
ಮಂಗಳೂರಿನಲ್ಲಿ ಆಟೋ ಸ್ಫೋಟಗೊಂಡಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮೊಹಮ್ಮದ್ ಶಾರೀಕ್ (24) ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ.
ಗೋಡೆಯ ಮೇಲೆ ಭಯೋತ್ಪಾದಕ ಬರಹ ಬರೆದಿದ್ದ ಪ್ರಕರಣದಲ್ಲಿ ಶರೀಕ್ ನ್ನು 2020 ರ ನವೆಂಬರ್ ನಲ್ಲಿ ಬಂಧಿಸಲಾಗಿತ್ತು. ಆತ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ. ತೀರ್ಥಹಳ್ಳಿಯವನಾದ ಶಾರೀಕ್ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ತನಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಆಟೋದಲ್ಲಿ ಕುಕ್ಕರ್ ಐಇಡಿಯೊಂದಿಗೆ ತೆರಳುತ್ತಿದ್ದ. ಈ ವೇಳೆ ಸ್ಫೋಟ ಸಂಭವಿಸಿದ್ದು, ಆಟೋ ಚಾಲಕ ಪುರುಷೋತ್ತಮ್ ಗೂ ತೀವ್ರ ಗಾಯಗಳಾಗಿದೆ.
ಈ ನಡುವೆ ತೀರ್ಥಹಳ್ಳಿಯಲ್ಲಿ ಆರೋಪಿ ಶಾರೀಖ್ ಹಾಗು ಆತನ ಸಂಬಂಧಿಕರ ನಿವಾಸಗಳ ಮೇಲೆ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಾಲ್ಕು ಮನೆಗಳು ಹಾಗು ಸೊಪ್ಪುಗಡ್ಡೆಯಲ್ಲಿರುವ ಶಾರೀಖ್ ನಿವಾಸದಲ್ಲಿ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಮೋಸ್ಟ್ ವಾಂಟೆಡ್ ಮತೀನ್, ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದ್ದು, ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಶಾರಿಕ್ ಮೈಸೂರಿನಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯಲ್ಲಿ ವಾಸವಿದ್ದು, ಆತನ ಮೈಸೂರಿನ ಬಾಡಿಗೆ ಮನೆಯಲ್ಲಿ ಹಲವು ಸ್ಫೋಟಕ ವಸ್ತು ಪತ್ತೆಯಾಗಿದ್ದು, ಮತ್ತೊಂದು ಫೇಕ್ ಐಡಿ ಪಡೆದು ಕೊಯಮುತ್ತೂರಿನಲ್ಲಿ ಕೂಡ ಈತ ಇದ್ದ ಎನ್ನಲಾಗಿದೆ. ಈ ಕಾರಣ ಕೊಯಮುತ್ತೂರಿನಲ್ಲಿ ನಡೆದ ಸ್ಫೋಟಕ್ಕು ಈತನ ಕೈವಾಡ ಇದೇಯ ಎನ್ನುವ ಅನುಮಾನ ಮೂಡಿದೆ.