ಹೊಸದಿಲ್ಲಿ : ಕಿರಿಯ ವಕೀಲರನ್ನು ಗುಲಾಮರಂತೆ ಕಾಣಬೇಡಿ, ಉತ್ತಮ ರೀತಿಯಲ್ಲಿ ಜೀವನ ಮಾಡುವಂತಾಗಲು ಅವರಿಗೆ ಉತ್ತಮ ಸಂಬಳ ಕೊಡಬೇಕು’ ಹೀಗೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
ವಕೀಲ ವೃತ್ತಿ ಎನ್ನುವುದು ಕೇವಲ ಹಿರಿಯದ್ದು ಎಂಬ ಭಾವನೆ ಬರುವಂತೆ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
“ಬೆಂಗಳೂರು, ಕೋಲ್ಕತಾ, ಹೊಸದಿಲ್ಲಿ , ಮುಂಬಯಿಗಳಲ್ಲಿ ಯುವ ವಕೀಲರು ವಾಸಿಸುತ್ತಿದ್ದರೆ, ಅಲ್ಲಿನ ಖರ್ಚುಗಳೆಷ್ಟು? ಅವರು ಊಟೋಪಚಾರ, ಬಾಡಿಗೆ, ಪ್ರಯಾಣಕ್ಕೆ ತಗಲುವ ವೆಚ್ಚ ಹೆಚ್ಚಾಗಿಯೇ ಇದೆ. ಕೆಲವು ಯುವ ವಕೀಲರಿಗೆ ಸೂಕ್ತ ರೀತಿಯಲ್ಲಿ ಸಂಭಾವನೆಯನ್ನೇ ಕೊಡಲಾಗುತ್ತಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಅವರು ಅಭಿಪ್ರಾಯಪಟ್ಟರು.
ದೀರ್ಘ ಕಾಲದಿಂದ ಯುವ ವಕೀಲರನ್ನು ಗುಲಾಮರಂತೆ ಕಾಣಲಾಗುತ್ತಿದೆ. ನಮ್ಮ ಮನೋಭಾವ ಆ ರೀತಿಯೇ ಬೆಳೆದು ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಪಾದಿಸಿದರು. ನಾವು ಹೀಗೆದ್ದೆವು ಎನ್ನುವಂತಿಲ್ಲ.
ನಾವು ನಮ್ಮ ಹಿರಿಯ ವಕೀಲರಿಂದ ಕಷ್ಟಪಟ್ಟು ವಕೀಲಿಕೆಯ ಪಟ್ಟುಗಳನ್ನು ಕಲಿತಿದ್ದೆವು. ಅದನ್ನೇ ನಮ್ಮ ಕಿರಿಯ ವಕೀಲರೂ ಅನುಭವಿಸಬೇಕು ಎಂದು ಈಗ ಹಿರಿಯರಾಗಿರುವವರು ಹೇಳುವುದು ಸೂಕ್ತ ಅಲ್ಲ. ಅದಕ್ಕಾಗಿ ಕಿರಿಯ ವಕೀಲರಿಗೆ ಕಡಿಮೆ ಸಂಬಳ ನೀಡಲಾಗುತ್ತದೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ ಎಂದು ಸಿಜೆಐ ಪ್ರತಿಪಾದಿಸಿದರು.