ಸಮಗ್ರ ನ್ಯೂಸ್: ರಾಜ್ಯದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ಪಶುಪಾಲನೆ ಮಾಡುತ್ತಾ ಜೀವನ ಮಾಡುತ್ತಿರುವ ರೈತರಿಗೆ ಅನ್ಯಾಯವಾಗದಂತೆ ಸೂತ್ರ ರೂಪಿಸಬೇಕೆಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮುಖ್ಯಸ್ಥರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೆಎಂಎಫ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿ, ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಕೆಎಂಎಫ್ ಸಂಸ್ಥೆಗೆ ತಗಲುತ್ತಿರುವ ವೆಚ್ಚ, ಹಾಲಿನ ದರ ಏರಿಕೆಗೆ ಕಾರಣಗಳು, ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗಳು, ಈ ನಷ್ಟಗಳನ್ನು ತಡೆಗಟ್ಟಲು ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.
ಗ್ರಾಹಕ ಹಾಗೂ ರೈತನಿಗೆ ಅನುಕೂಲವಾಗುವ ಸೂತ್ರವನ್ನು ಎರಡು ದಿನಗಳಲ್ಲಿ ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಆದರೆ, ದಿಢೀರನೆ 3 ರೂ. ದರ ಹೆಚ್ಚಳ ಮಾಡುವುದು ಬೇಡ. ಒಟ್ಟಾರೆ ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದರು.