ಸಮಗ್ರ ನ್ಯೂಸ್: ಇಂಡಿಯನ್ ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚಿದ ‘ಕಾಂತಾರ’ ಏಳು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾಂತಾರ’ ಇಂದು (ನವೆಂಬರ್ 18) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
50 ದಿನಗಳನ್ನು ಪೂರೈಸಿದ ಸಂದರ್ಭದಲ್ಲೂ ‘ಕಾಂತಾರ’ ಸಿನಿಮಾದ ಕಲೆಕ್ಷನ್ ಕೋಟಿ ಲೆಕ್ಕದಲ್ಲಿಯೇ ಇದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ‘ಕಾಂತಾರ’ ಕಲೆಕ್ಷನ್ ಅದ್ಭುತವಾಗಿದ್ದು, ಪ್ರತಿವಾರ ಬಾಕ್ಸಾಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿದೆ.
ಏಳನೇ ವಾರವೂ (50 ದಿನ ಕಂಡ ವಾರ) ‘ಕಾಂತಾರ’ ಸಿನಿಮಾ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ. ಎಲ್ಲಾ ಭಾಷೆಗಳಿಂದಳೂ ಸುಮಾರು 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದೇ ಖುಷಿಯಲ್ಲೇ ರಿಷಬ್ ಶೆಟ್ಟಿ ಖುಷಿಯಲ್ಲಿ ಟ್ವೀಟ್ ಮಾಡಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಭೂತಪೂರ್ವ ಯಶಸ್ಸನ್ನು ನೀಡಿದ್ದಕ್ಕೆ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹಾಗೇ ಪಂಜುರ್ಲಿ ಹಾಗೂ ಗುಳಿಗ ದೈವವನ್ನು ಸ್ಮರಿಸಿದ್ದಾರೆ. ” ಇದು ನಮ್ಮ ಪಾಲಿಗೆ ದೈವ ಭಾವನೆಯುಳ್ಳ ಸಂಭ್ರಮ. ವಿಶ್ವದಾದ್ಯಂತ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಈ ಗೆಲುವನ್ನು ಗಳಿಸಿ, ಒಪ್ಪಿಕೊಂಡು ಬದುಕುತ್ತಿದ್ದೇವೆ. ನಾವು ಪಂಜುರ್ಲಿ ಹಾಗೂ ಗುಳಿಗ ದೈವದ ಆಶೀರ್ವಾದಕ್ಕೆ ಭಾಜನರಾಗಿದ್ದೇವೆ. ಈ ಕ್ರೋಧವನ್ನು ಭೇದಿಸಲು ಸಾಧ್ಯವೇ ಇಲ್ಲ.” ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಇಲ್ಲಿವರೆಗೂ ‘ಕಾಂತಾರ’ ಗಳಿಕೆಯನ್ನು ಕಂಡು ಬೇರೆ ಬೇರೆ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಭಾರತದಲ್ಲಿ ಈ ಸಿನಿಮಾ 350 ಕೋಟಿ ರೂ. ಸಮೀಪದಲ್ಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ‘ಕಾಂತಾರ’ ಇದೂವರೆಗೂ 344 ಕೋಟಿ ರೂ. ಗಳಿಸಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಸಿನಿಮಾ ಬರೀ ಭಾರತದಲ್ಲಿಯೇ 350 ಕೋಟಿ ರೂ. ಗಡಿಯನ್ನು ದಾಟಲಿದೆ. ಐದು ಭಾಷೆಗಳಲ್ಲಿ ಕರ್ನಾಟಕದ ಪಾಲು ಹೆಚ್ಚಿದ್ದು, ಕೆಲವೇ ದಿನಗಳಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಮುರಿಯಬಹುದು ಎಂದು ಅಂದಾಜಿಸಲಾಗಿದೆ.
ಯುಎಇಯಲ್ಲಿ ‘ಕಾಂತಾರ’ ನವೆಂಬರ್ 13ರವರೆಗೆ ಸುಮಾರು 6.50 ಕೋಟಿ ಕಲೆ ಹಾಕಿದೆ. ಹಾಗೇ ಓವರ್‌ಸೀಸ್ ಕಲೆಕ್ಷನ್ 33 ಕೋಟಿ ರೂ. ಕಲೆಕ್ಷನ್ ಆಗಿದೆ. ಭಾರತದಲ್ಲಿ ಸುಮಾರು 344 ಕೋಟಿ ರೂ. ಕಲೆಕ್ಷನ್ ಆಗಿದ್ದರೆ, ಓವರ್‌ಸೀಸ್ ಕಲೆಕ್ಷನ್ 33 ಕೋಟಿ ರೂ. ಒಟ್ಟು 377 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 400 ಕೋಟಿ ಕ್ಲಬ್ ಸೇರಲಿದೆ ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ.
ಕರ್ನಾಟಕದಲ್ಲಿ 377 ಕೋಟಿ ರೂ. ಕಲೆಕ್ಷನ್‌ನಲ್ಲಿ ‘ಕಾಂತಾರ’ ಅತೀ ಹೆಚ್ಚು ಗಳಿಕೆ ಕಂಡಿದೆ. ಇಲ್ಲಿವರೆಗೂ ರಾಜ್ಯದಲ್ಲಿ ಸುಮಾರು 168 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಕೆಜಿಎಫ್ 2’ ಸಿನಿಮಾಗಿಂತ ಕೇವಲ 3.50 ಕೋಟಿ ಹಿಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಈ ದಾಖಲೆಯನ್ನು ಮುರಿಯಲಿದೆ ಎಂದು ಹೇಳಲಾಗುತ್ತಿದೆ.